ಸಾರಾಂಶ
ಹನುಮ ಸೇವಾ ಸಮಿತಿಯಿಂದ 6ನೇ ವರ್ಷದ ಹನುಮ ಜಯಂತ್ಯುತ್ಸವ
ಕನ್ನಡ ಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದಲ್ಲಿ ಶನಿವಾರ ಶ್ರೀ ಹನುಮ ಸೇವಾ ಸಮಿತಿಯಿಂದ 6ನೇ ವರ್ಷದ ಹನುಮ ಜಯಂತ್ಯುತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿತು.ಹುಣಸೂರು- ಬೇಗೂರು ರಸ್ತೆಯಲ್ಲಿ ಇರುವ ಕನಕ ಭವನದ ಮುಂಭಾಗ ಹನುಮೂರ್ತಿಗೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಶ್ರೀ ಮಹದೇವಸ್ವಾಮಿ ಅವರು ಮತ್ತು ಹನುಮ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಅವರು ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಹನುಮ ಜಯಂತಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಹನುಮ ಸೇವಾ ಸಮಿತಿಯಿಂದ ಹನುಮ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದೆ, ಈ ಜಯಂತಿಯನ್ನು ಎಲ್ಲ ತಾಲೂಕುಗಳಲ್ಲಿಯೂ ಆಚರಿಸುವುದು ಕಂಡು ಬರುತ್ತಿದೆ, ಶ್ರೀ ರಾಮನನ್ನ ಸೃಷ್ಟಿ ಮಾಡಿದ ಶ್ರೀ ವಾಲ್ಮೀಕಿ ಮಹರ್ಷಿಗಳು ಹನುಮನಲ್ಲಿರುವ ಶಕ್ತಿಯನ್ನು ಸಹ ತೋರಿಸಿಕೊಟ್ಟಿದ್ದಾರೆ. ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ನಡೆಸಲಿದ್ದಾರೆ. ಅದೇ ರೀತಿ ಅಯೋಧ್ಯೆಯಲ್ಲಿ ಶ್ರೀ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಿಸಿ ಕೊಡುವಂತೆ ಟ್ವಿಟರ್ ಗಳ ಮೂಲಕ ಪ್ರಧಾನಿಗಳಿಗೆ ಕೇಳಿಕೊಳ್ಳಲಾಗಿತ್ತು, ನಮ್ಮ ಬೇಡಿಕೆಗೆ ಮನ್ನಿಸಿ ಅಯೋಧ್ಯೆಯಲ್ಲಿ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಿಸಿ, ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ಶ್ರೀ ವಾಲ್ಮೀಕಿ ಅವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು.ಕೇಸರಿ ಶಾಲಿಗೆ ಭಾವೈಕ್ಯತೆಯ ಸಂಬಂಧ ಇರುವುದಿಲ್ಲ. ಈ ಶಾಲು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿ ಇರುವುದಿಲ್ಲ ಎಂದರು.
ಹನುಮ ಜಯಂತಿಯ ಅಂಗವಾಗಿ ಪಟ್ಟಣವನ್ನು ತಳಿರು ತೋರಣಗಳಿಂದ ಹಾಗೂ ಕೇಸರಿ ಧ್ವಜಗಳೊಂದಿಗೆ ಅಲಂಕಾರಗೊಳಿಸಲಾಗಿತ್ತು. ತಾಲೂಕಿನ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಹನುಮ ಭಕ್ತರು ಭಾಗವಹಿಸಿದ್ದರು.ಪಟ್ಟಣದ ವಿವಿಧ ಸಂಘ, ಸಂಸ್ಥೆಯವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹನುಮ ಭಕ್ತರಿಗೆ ತಂಪು ಪಾನೀಯ, ಕುಡಿಯಲು ನೀರು, ಮಜ್ಜಿಗೆ, ಬಿಸ್ಕತ್ತ ವಿತರಿಸಿದರು.
ಡೊಳ್ಳು ಕುಣಿತ, ಕೀಲು ಕುದುರೆ, ವೀರಗಾಸೆ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.ಸಮಿತಿಯ ನಂದೀಶ್, ಚಂದ್ರ ಮೌಳಿ, ಸುರೇಶ್, ರಾಜು, ಉಮೇಶ್, ಜಯಂತ್, ಪ್ರಮೋದ್, ಪ್ರಕಾಶ್, ಸುರೇಶ್, ಮಹೇಶ್, ದೀಪು, ಭಂಡಾರಿ, ಸತೀಶ್, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್, ಬ್ಯಾಂಕ್ ವೀರಪ್ಪ, ನಾಗಣ್ಣ, ಹನುಮ ಸೇವಾ ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು ಭಾಗವಹಿಸಿದ್ದರು.