ಸಾರಾಂಶ
ತೀವ್ರ ಕುತೂಹಲದೊಂದಿಗೆ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯದ ಆರಂಭದಿಂದಲೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದ ಮಾಹಿತಿ ಸಿಗುತ್ತಿದ್ದಂತೆ ತಾಲೂಕಿನ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2.84 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಾಗಮಂಗಲ ಮತ್ತು ಬೆಳ್ಳೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ತೀವ್ರ ಕುತೂಹಲದೊಂದಿಗೆ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯದ ಆರಂಭದಿಂದಲೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದ ಮಾಹಿತಿ ಸಿಗುತ್ತಿದ್ದಂತೆ ತಾಲೂಕಿನ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು.
ಪ್ರತಿ ಸುತ್ತಿನಲ್ಲಿಯೂ ಭಾರೀ ಬಹುಮತದ ಮುನ್ನಡೆ ಕಾಯ್ದುಕೊಂಡ ಎಚ್ಡಿಕೆ ಅಂತಿಮವಾಗಿ 2,84,620 ಮತಗಳ ಅಂತರದಿಂದ ಅಭೂತ ಪೂರ್ವ ಗೆಲುವು ಸಾಧಿಸಿದ ಫಲಿತಾಂಶ ಹೊರಬೀಳುತ್ತಿದ್ದಂತೆ ಮೈತ್ರಿ ಪಕ್ಷದ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತ, ಟಿ.ಮರಿಯಪ್ಪ ಸರ್ಕಲ್, ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತ ಸೇರಿದಂತೆ ಹಲವೆಡೆ ಪಟಾಕಿ ಸಿಡಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ವಿಜೇತ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಜಯಘೋಷ ಮೊಳಗಿಸಿದರು. ಜೆಡಿಎಸ್ ಬಿಜೆಪಿ ಪಕ್ಷಗಳ ಬಾವುಟ ಹಿಡಿದು ಬೈಕ್ ರ್‍ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.
ತಾಲೂಕಿನ ಬೆಳ್ಳೂರು, ಬಿಂಡಿಗನವಿಲೆ, ಕಸಬಾ, ಹೊಣಕೆರೆ ಹಾಗೂ ದೇವಲಾಪುರ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಪರ ಜಯಘೋಷ ಮೊಳಗಿಸಿ ಸಂಭ್ರಮಿಸಿದರು.