ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎಚ್.ಡಿ.ದೇವೇಗೌಡರು ಲಾಟರಿ ಪಿಎಂ, ಎಚ್.ಡಿ.ಕುಮಾರಸ್ವಾಮಿ ಲಾಟರಿ ಸಿಎಂ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಶಾಸಕ ಪಿ.ರವಿಕುಮಾರ್ ಜನಬೆಂಬಲದೊಂದಿಗೆ ಗೆದ್ದು ಬಂದವರು ಎಂದು ಲಾಟರಿ ಶಾಸಕ ಎಂದಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪಿ.ರುದ್ರಪ್ಪ ತಿರುಗೇಟು ನೀಡಿದರು.ದೇವೇಗೌಡರು ಪಕ್ಷದ ಸ್ವಂತ ಬಲದಿಂದ ಗೆದ್ದು ಪ್ರಧಾನಿಯಾದವರಲ್ಲ. ಹಾಗೆಯೇ, ಎಚ್.ಡಿ.ಕುಮಾರಸ್ವಾಮಿ ಅವರೂ ಜೆಡಿಎಸ್ ಬಹುಮತ ಸಾಧಿಸಿ ಮುಖ್ಯಮಂತ್ರಿ ಗದ್ದುಗೆ ಏರಲಿಲ್ಲ. ತಂದೆ- ಮಗ ಇಬ್ಬರೂ ಕಾಂಗ್ರೆಸ್ ಬೆಂಬಲದೊಂದಿಗೆ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಕಾಂಗ್ರೆಸ್‌ನ ಯಾರೊಬ್ಬರ ಬಗ್ಗೆಯೂ ಲಘುವಾಗಿ ಮಾತನಾಡುವ ನೈತಿಕತೆ ಜೆಡಿಎಸ್‌ನವರಿಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನಪ್ರತಿನಿಧಿಯೊಬ್ಬರ ಬಗ್ಗೆ ಮಾತನಾಡುವಾಗ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆಯಿಂದ ಇರಬೇಕು. ಪಿ.ರವಿಕುಮಾರ್ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಸಾಮಾನ್ಯ ಕುಟುಂಬದಿಂದ ಬಂದು ಚುನಾವಣೆಯಲ್ಲಿ ಒಮ್ಮೆ ಸೋತು ಮತ್ತೆ ಜನಬೆಂಬಲದೊಂದಿಗೆ ಶಾಸಕರಾದವರು. ಅಂತಹವರನ್ನು ಲಾಟರಿ ಶಾಸಕ ಎನ್ನುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರ್ಪಡಿಸುತ್ತದೆ ಎಂದು ಹೇಳಿದರು.ನಿಖಿಲ್ ಪ್ರಬಲ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರೂ ಮೂರು ಚುನಾವಣೆಯಲ್ಲಿ ಸೋಲನುಭವಿಸಿದರು. ಸೋಲಿನ ಹತಾಶೆ ಅವರನ್ನು ಬಹಳವಾಗಿ ಕಾಡುತ್ತಿದೆ. ಅದಕ್ಕಾಗಿ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಲಘುವಾಗಿ ಮಾತನಾಡುವಾಗ ನಿಖಿಲ್ ತಮ್ಮ ಕುಟುಂಬದವರ ರಾಜಕೀಯ ಹಿನ್ನೆಲೆಯನ್ನೂ ತಿಳಿದುಕೊಂಡಿಬೇಕು ಎಂದು ಸಲಹೆ ನೀಡಿದರು.
ನಗರಸಭಾ ಸದಸ್ಯ ಶ್ರೀಧರ್ ಮಾತನಾಡಿ, ಜನಸೇವೆಯಿಂದ ಬೆಳೆದು ಬಂದು ಜನನಾಯಕರಾಗಿರುವ ಪಿ.ರವಿಕುಮಾರ್ ಅವರನ್ನು ನಿಖಿಲ್ ಕುಮಾರಸ್ವಾಮಿ ಲಾಟರಿ ಶಾಸಕ ಎನ್ನುವ ಮೂಲಕ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ. ಈ ವಿಷಯವಾಗಿ ಕೂಡಲೇ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.2018ರ ಚುನಾವಣೆಯಲ್ಲಿ ಸೋತರೂ ಅವರು ಸುಮ್ಮನೆ ಕೂರಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಕೊರೋನಾ ಸಮಯದಲ್ಲಿ ರೈತರು ಬೆಳೆದ ತರಕಾರಿಗಳನ್ನು ಖರೀದಿಸಿ ನೆರವಿಗೆ ನಿಂತರು. ಕೊರೋನಾದಿಂದ ಸಾವನ್ನಪ್ಪಿದವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಶಾಸಕರಾಗಿ ಅಭಿವೃದ್ಧಿಪರವಾಗಿ ಶ್ರಮಿಸುತ್ತಿರುವುದನ್ನು ಸಹಿಸದೆ ನಿಖಿಲ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಶಿವನಂಜು ಮಾತನಾಡಿ, ಶಾಸಕ ಪಿ.ರವಿಕುಮಾರ್ ಕಳೆದೆರಡು ವರ್ಷಗಳಿಂದ ಕ್ಷೇತ್ರಕ್ಕೆ ತಂದಿರುವ ಅನುದಾನದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಅದಕ್ಕೆ ದಾಖಲೆಗಳನ್ನೂ ಕೊಡುತ್ತೇವೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ 8 ಸಾವಿರ ಕೋಟಿ ರು. ಘೋಷಿಸಿದರು. ಪುತ್ರ ನಿಖಿಲ್ ಲೋಕಸಭಾ ಚುನಾವಣೆಯಲ್ಲಿ ಸೋತ ಕೂಡಲೇ ವಾಪಸ್ ಪಡೆದುಕೊಂಡರು. ರವಿಕುಮಾರ್ ಮಂಡ್ಯ ವಿಶ್ವವಿದ್ಯಾನಿಲಯವನ್ನು ಉಳಿಸಿ, ಮೈಷುಗರ್ ಕಾರ್ಖಾನೆ ಸಮರ್ಥವಾಗಿ ಮುನ್ನಡೆಯುವುದಕ್ಕೆ ಕಾರಣಕರ್ತರಾಗಿದ್ದಾರೆ. ಕ್ಷೇತ್ರಕ್ಕೆ ನೂರಾರು ಕೋಟಿ ರು. ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಬಗ್ಗೆ ಮಾತನಾಡುವಾಗಿ ಎಚ್ಚರದಿಂದ ಇರಬೇಕು ಎಂದರು.ಗೋಷ್ಠಿಯಲ್ಲಿ ಜಾಕೀರ್‌ಪಾಷಾ, ನಹೀಂ, ಶಿವಪ್ರಕಾಶ್, ಪೂರ್ಣಿಮಾ. ದ್ಯಾವಪ್ಪ ಇದ್ದರು.