ರಾಮನಗರ: ಸೇವೆ ಕಾಯಂ, ಮಾಸಾಶನವನ್ನು 5 ಸಾವಿರ ರು.ವರೆಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷ ಚೇತನರು ನಡೆಸುತ್ತಿರುವ ವಿಧಾನಸೌಧ ಚಲೋ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು
ರಾಮನಗರ: ಸೇವೆ ಕಾಯಂ, ಮಾಸಾಶನವನ್ನು 5 ಸಾವಿರ ರು.ವರೆಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷ ಚೇತನರು ನಡೆಸುತ್ತಿರುವ ವಿಧಾನಸೌಧ ಚಲೋ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದ ಶುಕ್ರವಾರ ಆರಂಭವಾದ ವಿಶೇಷ ಚೇತನರ ವಿಧಾನಸೌಧ ಚಲೋ ಪಾದಯಾತ್ರೆ ಭಾನುವಾರ ರಾತ್ರಿ ವೇಳೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಗಡಿ ಭಾಗ ಕಣಮಿಣಿಕೆ ಟೋಲ್ ಪ್ಲಾಜಾ ತಲುಪಿತು. ಅಲ್ಲಿ ಪೊಲೀಸರು ಪಾದಯಾತ್ರೆ ಮುಂದೆ ತೆರಳದಂತೆ ಅಡ್ಡಿ ಪಡಿಸಿದರು.ಈ ವೇಳೆ ಆಕ್ರೋಶಗೊಂಡ ವಿಶೇಷಚೇತನರು ಕಣಮಿಣಿಕೆ ಟೋಲ್ ಬಳಿ ಉರುಳು ಸೇವೆ ಮಾಡಿದರು. ಪೊಲೀಸರು ಮುಂದೆ ತೆರಳಲು ಅವಕಾಶ ನೀಡದಿದ್ದಾಗ ಆರ್.ಅಶೋಕ್ ಅವರೊಂದಿಗೆ ವಿಶೇಷ ಚೇತನರು ಸರ್ವಿಸ್ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮುಂದುವರೆಸಿದರು.
ನಿಮಗೆಲ್ಲ ಫ್ರೀಡಂ ಪಾರ್ಕಿಗೆ ಹೋಗಲು ಬಸ್ಸಿನ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ಇಲ್ಲಿಯೇ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಪೊಲೀಸರು ವಿಶೇಷ ಚೇತನರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ವಿಶೇಷ ಚೇತನರು ಒಪ್ಪಲಿಲ್ಲ.ಈ ವಿಷಯ ತಿಳಿದ ಕೂಡಲೇ ಶ್ರವಣಬೆಳಗೊಳದಿಂದ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಕುಮಾರಸ್ವಾಮಿರವರು, ವಿಕಲಚೇತರನ್ನು ರಸ್ತೆಯಲ್ಲಿಯೇ ತಡೆದಿದ್ದ ಪೊಲೀಸರ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಹಲವು ದಿನಗಳಿಂದ ರಾಮನಗರದಲ್ಲಿ ಧರಣಿ ನಡೆಸುತ್ತಿದೆವು. ತಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ವಿಧಾನಸೌಧ ಚಲೋ ಆರಂಭಿಸಿದೆವು. ಆದರೆ, ಬೆಂಗಳೂರು ನಗರ ಪ್ರವೇಶಿಸುವುದಕ್ಕೆ ಪೊಲೀಸರು ತಡೆದಿದ್ದಾರೆ. ಅದಕ್ಕಾಗಿ ನಾವು ರಸ್ತೆಯಲ್ಲಿಯೇ ಧರಣಿ ಕೂರಬೇಕಾಯಿತು ಎಂದು ವಿಕಲಚೇತನರು ಸಚಿವರಲ್ಲಿ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಜೊತೆ ಕುಮಾರಸ್ವಾಮಿರವರು ಪೊಲೀಸರ ಜತೆ ಮಾತುಕತೆ ನಡೆಸಿದರು. ಅಂಗವೈಕಲ್ಯ ಇದ್ದರೂ ಎದೆಗುಂದದೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಕೂತಿದ್ದಾರೆ. ಇಂತಹವರ ಬಗ್ಗೆ ನೀವು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು, ಆರ್.ಅಶೋಕ್, ಮಾಜಿ ಶಾಸಕ. ಎ.ಮಂಜುನಾಥ್ ಹಾಗೂ ವಿಕಲಚೇತನರ ಜತೆಯಲ್ಲಿ ರಸ್ತೆಯಲ್ಲಿಯೇ ಧರಣಿ ಕೂತರಲ್ಲದೆ, ಅವರ ಪಾದಯಾತ್ರೆಯನ್ನು ಫ್ರೀಡಂ ಪಾರ್ಕ್ ವರೆಗೂ ಅನುಮತಿಸದೆ ಹೋದರೆ ಇಲ್ಲಿಂದ ಮೇಲೆ ಏಳುವುದಿಲ್ಲ. ನಾವೆಲ್ಲರೂ ಇಡೀ ರಾತ್ರಿ ಇಲ್ಲಿಯೇ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊನೆಗೂ ಸಚಿವರ ಆಗ್ರಹಕ್ಕೆ ಮಣಿದ ಪೊಲೀಸರು, ಇಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ತೆರಳಬಹುದು ಎಂದು ಕುಮಾರಸ್ವಾಮಿ ಅವರಿಗೆ ತಿಳಿಸಿದರು.ಸರ್ಕಾರದ ವಿರುದ್ಧ ಎಚ್ ಡಿಕೆ ಕಿಡಿ :
ಈ ಸಂದರ್ಭದಲ್ಲಿ ವಿಕಲಚೇತನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಇವರು ಪ್ರತಿಭಟನೆ ನಡೆಸುತ್ತಿದ್ದರೂ ಈ ಸರ್ಕಾರಕ್ಕೆ ಕರುಣೆ ಬಂದಿಲ್ಲ ಎಂದರೆ ನಿಜಕ್ಕೂ ಬೇಸರ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ವಿಕಲಚೇತನರು ಮುಖ್ಯಮಂತ್ರಿ ಕಚೇರಿ, ನಿವಾಸ ಹಾಗೂ ವಿಧಾನಸೌಧಕ್ಕೆ.ರಾಜಾರೋಷವಾಗಿ ಬರುವ ವ್ಯವಸ್ಥೆ ಇತ್ತು. ಆದರೆ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಅವರನ್ನು ಫ್ರೀಡಂ ಪಾರ್ಕ್ ವರೆಗೆ ಬಿಡಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಬೇರೆ ಉದೇಶಗಳಿಗೆ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿದೆ. ಭಾರತ್ ಜೋಡೋ ಸಂಘಗಳಿಗೆ ಸಾವಿರ ಕೋಟಿ ಕೊಡುವುದಕ್ಕೆ ಇವರ ಬಳಿ ಹಣವಿದೆ. ದುಡಿಯುವ ಯುವಕರಿಗೆ ಪುಕ್ಕಟೆ ಹಣ ಕೊಟ್ಟು ಮದ್ಯದ ಅಂಗಡಿಗೆ ಕಳುಹಿಸುತ್ತಿದ್ದಾರೆ. ಪ್ರತಿ ಪಂಚಾಯತಿಗೆ 10 ಲಕ್ಷ ಕೊಡುವುದಕ್ಕೆ ಇವರಿಗೆ ಕಷ್ಟ ಇಲ್ಲ. ಗ್ಯಾರಂಟಿ ಸಮಿತಿಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸಲು ನೂರಾರು ಕೋಟಿ ಕೊಡೋದಕ್ಕೆ. ಇವರತ್ತಿರ ದುಡ್ಡಿದೆ. ಆದರೆ ವಿಕಲಚೇತನರ ಬೇಡಿಕೆ ಈಡೇರಿಸಲು ಇವರ ಬಳಿ ಹಣ ಇಲ್ಲ. ಇಷ್ಟೆಲ್ಲಾ ಮಾಡುವ ಸರ್ಕಾರಕ್ಕೆ ವಿಕಲಚೇತನರಿಗೆ ಮಾಶಾಸನ ಕೊಡುವುದಕ್ಕೆ ಗತಿ ಇಲ್ಲ ಎಂದರೆ ಏನು ಹೇಳುವುದು. ಇದೊಂದು ದರಿದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ನೀವು ಹೆದರಬೇಕಾಗಿಲ್ಲ. ನಿಮ್ಮ ಜೊತೆ ನಾನು ಮತ್ತು ಅಶೋಕ್ ದೃಢವಾಗಿ ನಿಲ್ಲುತ್ತೇವೆ. ನಿಮ್ಮ ಪಾದಯಾತ್ರೆಯನ್ನು ಧೈರ್ಯವಾಗಿ ಮುಂದುವರಿಸಿ ಎಂದು ಕುಮಾರಸ್ವಾಮಿ ಪ್ರತಿಭಟನಾಕಾರರಿಗೆ ಕರೆ ನೀಡಿದರು.ಪಿಂಚಣಿ ಹಣ ಕೊಡಲಾಗದ ಮಾನಗೆಟ್ಟ ಸರ್ಕಾರ :
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಇದೊಂದು ಮಾನಗೆಟ್ಟ ಸರ್ಕಾರ . ಅಂಗವಿಲಕರಿಗೆ 5 ತಿಂಗಳಿಂದ ಪಿಂಚಣಿ ಹಣ ಕೊಡಲಾಗದ ಮಾನಗೆಟ್ಟ ಸರ್ಕಾರ. ನಮ್ಮ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಪಿಂಚಣಿ ಹಣ ಹೆಚ್ಚಳ ಮಾಡಿದೆ. ಪಿಂಚಣಿ ಕೊಡಲು ಹಣ ಇಲ್ಲ ಎಂದರೆ ರಾಜ್ಯ ಸರ್ಕಾರದ ಹಣ ರಾಹುಲ್ ಗಾಂಧಿ , ಪ್ರಿಯಾಂಕ ಗಾಂಧಿ ಅಥವಾ ಜಿರಳೆ ಪಾರ್ಟಿಗೆ ಹೋಗುತ್ತಿದೆಯೇ ಎಂದು ಪ್ರಶ್ನಿಸಿ ಕಿಡಿಕಾರಿದರು.ಕಾಲು ಇಲ್ಲದವರನ್ನು ಬಂಧಿಸಲು ಮೂವರು ಡಿಸಿಗಳು ಬಂದಿದ್ದಾರೆ. ಅಲ್ಲೆಲ್ಲೊ ಟೆರರಿಸ್ಟ್ ಗಳು ಬಂದರೆ ಗುಂಡು ಹೊಡಿಯುತ್ತಾರೆಂಬ ಭಯದಿಂದ ಹೋಗುವುದಿಲ್ಲ. ಆದರೆ, ನಿಮ್ಮನ್ನು ಬಂಧಿಸಲು ಬಂದಿದ್ದಾರೆ. ಬಿಜೆಪಿ - ಜೆಡಿಎಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರನ್ನು ಏಕೆ ಬಂಧಿಸಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು.
ರಾತ್ರಿ ಜೈನ ಆಶ್ರಮದಲ್ಲಿ ವಾಸ್ತವ್ಯ ಹೂಡಿರುವ ವಿಶೇಷ ಚೇತನರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತೆರಳಲು ನಿರ್ಧರಿಸಿದರು.------------------------------
...ಕೋಟ್ ...ವಿಕಲಚೇತನರು ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ನಡೆಸಲು ಅವಕಾಶ ಕೊಡಿಸಿದ್ದೇವೆ. ಅವರ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ. ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ಇವರ ಬೇಡಿಕೆಗಳನ್ನು ಈಡೇರಿಸಬೇಕು.
- ಕುಮಾರಸ್ವಾಮಿ, ಕೇಂದ್ರ ಸಚಿವರು.-------------------------------
18ಕೆಆರ್ ಎಂಎನ್ 3,4.ಜೆಪಿಜಿ3.ವಿಶೇಷ ಚೇತನರ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡಿರುವುದು.
4.ವಿಶೇಷ ಚೇತನರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಹೆಜ್ಜೆ ಹಾಕುತ್ತಿರುವುದು.-------------------------------