ಸಾರಾಂಶ
ಚನ್ನಪಟ್ಟಣ: ದುರದೃಷ್ಟವಶಾತ್ ಕಳೆದ 10-15 ವರ್ಷಗಳಿಂದ ಕುಮಾರಸ್ವಾಮಿ ಕುಟುಂಬದವರೇ ನನ್ನ ವಿರುದ್ಧ ಚುನಾವಣೆಗೆ ಬರುತ್ತಿದ್ದಾರೆ. ಈ ಹಿಂದೆ ಅನಿತಾ ಕುಮಾರಸ್ವಾಮಿ, ನಂತರ ಕುಮಾರಸ್ವಾಮಿ, ಇದೀಗ ಅವರ ಮಗ ನನ್ನ ವಿರುದ್ಧ ನಿಂತಿದ್ದಾರೆ. ಕ್ಷೇತ್ರದಲ್ಲಿ ವಂಶಪಾರಂಪರ್ಯ ಆಡಳಿತ ಕೊನೆಗೊಳ್ಳಬೇಕು. ಜನ ತಾಲೂಕಿನ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ತಾಲೂಕಿನ ಹೊಂಗನೂರು ಜಿಪಂ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಚುನಾವಣೆಯನ್ನು ನಾವು ಯಾರೂ ಬಯಸಿರಲಿಲ್ಲ. ಚನ್ನಪಟ್ಟಣ ಬೇಡ ಎಂದು ಹೇಳದೆ-ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ನಾನಿಂದು ನಿಮ್ಮ ಮುಂದೆ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದರು.ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಏನು ಎಂಬುದು ಈಗ ಅರ್ಥವಾಗಿದೆ. ಅವರು ಇಲ್ಲಿಗೆ ಬರುವಾಗ ಏಕೆ ಬಂದರು, ಹೋಗುವಾಗ ಏಕೆ ಹೋದರು ಎಂಬುದು ಹೇಳಲಿಲ್ಲ. ಅಧಿಕಾರ ಹುಡುಕಿಕೊಂಡು ಮಂಡ್ಯಕ್ಕೆ ಹೋದ ಅವರು, ಅಲ್ಲಿ ಸಂಸದರಾಗಿ ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.
ಪುತ್ರ ವ್ಯಾಮೋಹ:ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ಪ್ರತಿ ಹಳ್ಳಿಗಳಲ್ಲೂ ಪ್ರಶ್ನೆ ಮಾಡುತ್ತಿದ್ದೇವೆ. ಜನರ ಕಷ್ಟ ಕೇಳದ ಕುಮಾರಸ್ವಾಮಿ ಯಾವ ನೈತಿಕತೆ ಹೊತ್ತುಕೊಂಡು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬುದನ್ನು ಜನರು ಪ್ರಶ್ನಿಸಬೇಕು. ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಇದು ಇವರ ಕೊನೆಯ ಪ್ರಯತ್ನವಾಗಿದೆ ಎಂದು ಹೇಳಿದರು.
ಕಣ್ಣೀರು ಒರೆಸುವವನು ನಿಜವಾದ ನಾಯಕ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನರಿಗೆ ಇವರ ಭಾವನಾತ್ಮಕತೆ, ಕಣ್ಣೀರು ಎಲ್ಲವೂ ಅರ್ಥವಾಗಿದೆ. ನಾಯಕನಾದವನು ಜನರ ಕಣ್ಣೀರನ್ನು ಒರೆಸಬೇಕೆ ಹೊರತು ಆತ ಕಣ್ಣೀರು ಹಾಕಬಾರದು. ಆಗ ಮಾತ್ರ ಆತ ನಾಯಕನಾಗಿ ಬೆಳೆಯುತ್ತಾನೆ ಎಂದರು.ಕುಮಾರಣ್ಣನ ನೋಟು, ಯೋಗೇಶ್ವರ್‌ಗೆ ಓಟು:
ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಸಾಕ್ಷಿ ಗುಡ್ಡೆ ಏನು? ಬಲವಂತವಾಗಿ ಮಗನನ್ನು ನಿಲ್ಲಿಸಿ, ಅವನನ್ನು ಅಳಿಸಿ, ಈಗ ಜನರೇ ಅವನ ಕಣ್ಣೀರು ಒರೆಸಬೇಕು ಎಂದು ಕೇಳುತ್ತಾರಲ್ಲ. ಅವರಿಗೆ ನೈತಿಕತೆ ಇದೆಯೇ? ಕ್ಷೇತ್ರದ ಜನರು ಕುಮಾರಣ್ಣನ ನೋಟು ಪಡೆದು ಯೋಗೇಶ್ವರ್‌ಗೆ ಮತ ಹಾಕಬೇಕು. ನನ್ನ ಮೇಲೆ ವಿಶ್ವಾಸವಿಡಬೇಕು ಎಂದು ಮನವಿ ಮಾಡಿದರು.ಸೋತರು ಜನರ ನಡುವೆ ನಿಂತಿದ್ದೇನೆ:
ಕುಮಾರಸ್ವಾಮಿ ಅವರ ವಿರುದ್ಧ ಎರಡು ಚುನಾವಣೆ ಸೋತಿದ್ದರೂ, ಜನರ ನಡುವೆ ನಿಂತು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಹಾಗೂ ಹಿರಿಯ ನಾಯಕರು ನನ್ನ ಬೆನ್ನಿಗಿದ್ದಾರೆ. ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳು ಜನರ ಮನಸ್ಸನ್ನು ಗೆದ್ದಿವೆ. ಈಗ ನಾನು ಕಾಂಗ್ರೆಸ್ ಸೇರಿದ್ದು, ಹಸ್ತ ಗುರುತಿಸಿ ನೀವು ಮತ ಹಾಕಿ ಮತ್ತೊಮ್ಮೆ ನಿಮ್ಮ ಸೇವೆಗಾಗಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ವೆಂಕಟೇಶ್, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಪ್ರದೀಪ್ ಈಶ್ವರ್, ರವಿ ಗಣಿಗ, ನೆಲಮಂಗಲ ಶ್ರೀನಿವಾಸ್, ಎಂಎಲ್ಸಿಗಳಾದ ಪುಟ್ಟಣ್ಣ, ರಾಮೋಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಮಾಜಿ ಶಾಸಕರಾದ ಅಶ್ವಥ್, ರಾಜು, ಚಿತ್ರನಟ ಸಾಧು ಕೋಕಿಲ, ಲಿಂಗೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
(ಒಂದು ಫೋಟೋ ಮಾತ್ರ ಬಳಸಿ)ಪೊಟೋ೪ಸಿಪಿಟ೨:
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ಬೃಹತ್ ಹೂವಿನಹಾರ ಹಾಕಿ ಅಭಿನಂದಿಸಲಾಯಿತು.ಪೊಟೋ೪ಸಿಪಿಟ೩:
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾಗವಹಿಸಿದ್ದರು.