ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಮಾನ್ಯವಾಗಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಜಿಲ್ಲಾ ಕೇಂದ್ರ, ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಬಿರುಸಿನಿಂದ ಪ್ರಚಾರ ನಡೆಸುವುದನ್ನು ಕಾಣುತ್ತೇವೆ. ಆದರೀಗ ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಚುನಾವಣಾ ಪ್ರಚಾರದಲ್ಲಿ ಹೊಸದೊಂದು ಪ್ರಯತ್ನಕ್ಕೆ ನಾಂದಿ ಹಾಡುತ್ತಿದೆ.ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ನಡೆಸುವ ಪ್ರಚಾರವನ್ನು ಮೂರು ಹಂತಗಳನ್ನಾಗಿ ವಿಂಗಡಿಸಿದೆ. ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ನಡೆಸುವ ಪ್ರಚಾರ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಬಹಿರಂಗ ಸಭೆಗೆ ಮಾತ್ರ ಸೀಮಿತವಾಗಿದ್ದರೆ, ಹೋಬಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಅವರ ಆರೋಗ್ಯದ ಕಾರಣ ಮತ್ತು ಬೇಸಿಗೆಯ ಬಿಸಿಲ ತಾಪ ಹೆಚ್ಚಾಗಿರುವುದರಿಂದ ತೆರೆದ ವಾಹನದಲ್ಲಿ ಹೋಬಳಿ, ಪಂಚಾಯಿತಿ ವ್ಯಾಪ್ತಿಯಲ್ಲಿ ರ್‍ಯಾಲಿ ಪ್ರಚಾರ ನಡೆಸುವುದಕ್ಕೆ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಚಾರವನ್ನು ಹಂಚಿಕೆ ಸೂತ್ರದ ಆಧಾರದ ಮೇಲೆ ನಡೆಸುವುದಕ್ಕೆ ಮುಂದಾಗಿದೆ. ಈ ರೀತಿಯ ಪ್ರಚಾರ ಜಿಲ್ಲೆಯ ಜನರಿಗೆ ಹೊಸದಾಗಿ ಕಂಡುಬರುತ್ತಿದೆ.ಏ.16ರಿಂದ ಎಚ್.ಡಿ.ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಮಳವಳ್ಳಿ, ಏ.17ರಂದು ಕೆ.ಆರ್.ಪೇಟೆ, ಏ.18ಕ್ಕೆ ಕೆ.ಆರ್.ನಗರ, ಏ.20ಕ್ಕೆ ಮೇಲುಕೋಟೆ, ಏ.21ಕ್ಕೆ ಶ್ರೀರಂಗಪಟ್ಟಣ, ಏ.22ಕ್ಕೆ ನಾಗಮಂಗಲ, ಏ.23ಕ್ಕೆ ಮದ್ದೂರು, ಏ.24ರಂದು ಮಂಡ್ಯ ತಾಲೂಕಿನಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ತಂದೆ ಕುಮಾರಸ್ವಾಮಿ ಪರ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೋಬಳಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏ.13ರಂದು ಮಳವಳ್ಳಿ ತಾಲೂಕಿನಿಂದ ಪ್ರಚಾರ ಆರಂಭಿಸಲಿದ್ದಾರೆ. ಈ ಪ್ರಚಾರದಲ್ಲಿ ಸ್ಥಳೀಯ ಜೆಡಿಎಸ್ ನಾಯಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುವರು. ಇನ್ನುಳಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಜೆಡಿಎಸ್-ಬಿಜೆಪಿ ನಾಯಕರು ಜವಾಬ್ದಾರಿ ವಹಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಹೆಸರು ಜನಮಾನಸದಲ್ಲಿ ಚಿರಪರಿಚಿತವಾಗಿರುವುದರಿಂದ ಹೊಸದಾಗಿ ಜನರಿಗೆ ಪರಿಚಯಿಸಿಕೊಡುವ ಅಗತ್ಯವಿಲ್ಲ. ಜೊತೆಗೆ ಆರೋಗ್ಯ ಸಮಸ್ಯೆ ಇರುವ ಅವರಿಗೆ ಹೆಚ್ಚು ಆಯಾಸ ನೀಡಬಾರದೆಂಬ ಕಾರಣಕ್ಕೆ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ಸ್ಥಳೀಯ ದಳಪತಿಗಳೇ ವಹಿಸಿಕೊಂಡಿದ್ದಾರೆ. ತಾವೇ ಪ್ರಚಾರದ ಜವಾಬ್ದಾರಿ ವಹಿಸಿಕೊಂಡು ಗೆಲ್ಲಿಸಿಕೊಂಡು ಬರುವುದಾಗಿ ಕುಮಾರಸ್ವಾಮಿ ಅವರಿಗೆ ವಾಗ್ದಾನವನ್ನೂ ನೀಡಿದ್ದಾರೆ.
ಜಿಲ್ಲೆಯ ಕೆಲವು ತಾಲೂಕುಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚುನಾವಣಾ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ಅವರ ಪ್ರಚಾರದ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ರೂಪಿಸಿರುವ ಹೊಸ ಮಾದರಿಯ ಚುನಾವಣಾ ಪ್ರಚಾರವನ್ನು ಜಿಲ್ಲೆಯ ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.