ಕೇಂದ್ರ ಸಚಿವ ಕುಮಾರಸ್ವಾಮಿ ಅವರದ್ದು ದಲಿತರ ಏಳಿಗೆ ಸಹಿಸದ ಮನೋಸ್ಥಿತಿ ಎಂದು ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರು ಬಳಸಿದ "ಬಲಿತ ದಲಿತ " ಎಂಬ ಪದ ಹಾಗೂ ಏಕವಚನದ ವಾಗ್ದಾಳಿಗೆ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರದ್ದು ದಲಿತರ ಏಳಿಗೆ ಸಹಿಸದ ಮನೋಸ್ಥಿತಿ ಎಂದು ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರು ಬಳಸಿದ "ಬಲಿತ ದಲಿತ " ಎಂಬ ಪದ ಹಾಗೂ ಏಕವಚನದ ವಾಗ್ದಾಳಿಗೆ ಆಕ್ರೋಶ ವ್ಯಕ್ತಪಡಿಸಿದರು.ಕಲಬುರಗಿ ಪ್ರವಾಸದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕುಮಾರಸ್ವಾಮಿಯವರ ದಲಿತ ವಿರೋಧಿ ಮನಸ್ಥಿತಿ ಮತ್ತು ಭಾಷಾ ಪ್ರಯೋಗಕ್ಕೆ ಆಕ್ಷೇಪಿಸುತ್ತಲೇ ಭಾವುಕರಾದರು.
ಕುಮಾರಸ್ವಾಮಿ ಅವರಿಗೆ ಕೇವಲ ಡಿ.ಕೆ. ಶಿವಕುಮಾರ್ ಅಥವಾ ಇತರ ನಾಯಕರ ಮೇಲಷ್ಟೇ ಅಸೂಯೆ ಅನ್ಕೊಂಡಿದ್ದೆ, ಆದರೆ ವಾಸ್ತವ ಹಾಗಿಲ್ಲ, ಅವರ ಭಾಷೆ ಮತ್ತು ವರ್ತನೆ ಗಮನಿಸಿದರೆ ದಲಿತ ಸಮುದಾಯದ ಮೇಲೂ ಅವರಿಗೆ ತೀವ್ರ ಅಸೂಯೆ ಇರುವುದು ಸ್ಪಷ್ಟ. ಅದರಲ್ಲೂ ನನ್ನ ಬಗ್ಗೆ ಅವರಿಗೆ ತುಂಬ ಹೊಟ್ಟೆಕಿಚ್ಚಿದೆ ಎಂದು ಆರೋಪಿಸಿದರು.ನಾವು ಸಂವಿಧಾನದ ಅಡಿಯಲ್ಲಿ ಜನರಿಂದ ಆಯ್ಕೆಯಾಗಿ ಬಂದ ಸಚಿವರು. ನಾವು ನಿಮ್ಮ ಮನೆಯಾಳುಗಳಲ್ಲ. ಏಳಿಗೆಯನ್ನು ಸಹಿಸದ ಮನಸ್ಥಿತಿಯಿಂದಾಗಿಯೇ ಎಚ್ಡಿಕೆ ಈ ರೀತಿ ಮಾತನಾಡುತ್ತಿದ್ದಾರೆ. ದಲಿತ ಸಮುದಾಯದ ನಾಯಕರು ಅಧಿಕಾರಕ್ಕೆ ಬರುವುದನ್ನು ಅಥವಾ ಪ್ರಶ್ನಿಸುವುದನ್ನು ಅವರು ಸಹಿಸುವುದಿಲ್ಲ ಎಂದರು. *ನಾವು ನಿಮ್ಮ ಮನೆಯಾಳುಗಳಲ್ಲ: ಕುಮಾರಸ್ವಾಮಿ ಅವರ ಏಕವಚನದ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ನಾವು ನಿಮ್ಮ ಮನೆಯಾಳುಗಳಲ್ಲ. ಸಂವಿಧಾನ ನಮಗೆ ಸಮಾನತೆ ನೀಡಿದೆ. ನಾವೂ ಜನರಿಂದ ಆಯ್ಕೆಯಾಗಿ ಬಂದ ಸಚಿವರು. ನಾಲಗೆ ಹತೋಟಿಯಲ್ಲಿಟ್ಟುಕೊಂಡು ಮಾತನಾಡಿ ಎಂದು ತೀಕ್ಷ್ಣವಾಗಿ ಎಚ್ಚರಿಸಿದರು.ಕುಮಾರಸ್ವಾಮಿ ತುಂಬ ಜನಪ್ರೀಯರು ಎಂದು ಹೇಳುತ್ತಿದ್ದಾರೆ. ಕಲಬುರಗಿಗೆ ಬಂದು ಸ್ಪರ್ಧಿಸಲಿ ನೋಡೋಣ? ಕಲ್ಯಾಣದಲ್ಲಿ 4 ಸ್ಥಾನ ಗೆಲ್ಲಲು ಆಗದವರು ನೀವು, ಚುನಾವಣೆ ರಾಜಕಾರಣ, ಮೀಸಲು ಮಾತನಾಡುತ್ತಾರೆಂದು ಖರ್ಗೆ ಮಾತಲ್ಲಿ ತಿವಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ಸಂವಿಧಾನದ ಅಡಿಯಲ್ಲಿ ನಾವು ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಆದರೆ ವಿಷಯಾಧಾರಿತವಾಗಿ ಉತ್ತರಿಸಲು ಸಾಧ್ಯವಾಗದ ಕುಮಾರಸ್ವಾಮಿ, ನಮ್ಮ ಜಾತಿ ಮತ್ತು ಕುಟುಂಬವನ್ನು ಎಳೆದು ತಂದು ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ ಎಂದು ಖರ್ಗೆ ಕಿಡಿಕಾರಿದರು.*ಮೋದಿ ಮನೆಗೆ ಹೋಗಿದ್ದು ದೊಡ್ಡ ಗೌಡರು: ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಸಿಗಬೇಕು. ತಮಗೆ ರಾಜ್ಯಸಭಾ ಸದಸ್ಯತ್ವ ಸಿಗಲೆಂಬ ಕಾರಣಕ್ಕಾಗಿ ಕುಮಾರಸ್ವಾಮಿ ಅವರ ತಂದೆ ಎಚ್.ಡಿ. ದೇವೇಗೌಡರೇ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಅಲೆದಾಡಿದ್ದರು. ಇಂತಹ ರಾಜಕೀಯ ಮಾಡುವುದು ಕುಮಾರಸ್ವಾಮಿ ಅವರ ಕುಟುಂಬವೇ ಹೊರತು ನಮ್ಮದಲ್ಲ. ಇಂತಹ ರಾಜಕಾರಣ ಕುಮಾರಸ್ವಾಮಿ ಕುಟುಂಬಕ್ಕೆ ಶೋಭೆ ತರುವುದಿಲ್ಲ " ಎಂದರು.ನೀವು ಅಡ್ಜಸ್ಟ್ಮೆಂಟ್ ಹಾಗೂ ಅವಕಾಶವಾದಿ ರಾಜಕಾರಣ ಮಾಡುವವರು. ಒಂದು ಕಾಲದಲ್ಲಿ ಆರ್ಎಸ್ಎಸ್ ವಿಷಸರ್ಪ ಎಂದು ಲೇಖನ ಬರೆದು ಮತ್ತೊಂದು ಕ್ಷಣದಲ್ಲಿ ಅದೇ ಸಿದ್ದಾಂತದವರೊಂದಿಗೆ ಕೈಜೋಡಿಸುತ್ತೀರಿ ಎಂದು ಸಚಿವ ಖರ್ಗೆ ಟೀಕಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ ಸಿದ್ಧಾರ್ಥ ಟ್ರಸ್ಟ್ ಪ್ರಕರಣದ ಬಗ್ಗೆ ಸಂಧಾನ ಮಾಡಿಕೊಳ್ಳಲು ಯತ್ನಿಸಿದ್ದರು ಎಂಬ ಕುಮಾರಸ್ವಾಮಿ ಅವರ ಆರೋಪವನ್ನು ಪ್ರಿಯಾಂಕ್ ಖರ್ಗೆ ನಿರಾಕರಿಸಿದರು. ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಯಾರ ಮುಂದೆಯೂ ತಲೆಬಾಗಿದವರಲ್ಲ. ಕುಮಾರಸ್ವಾಮಿ ಅವರ ಆರೋಪದಲ್ಲಿ ನಿಜವಿದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ನಿವಾಸಕ್ಕೆ ಭೇಟಿ ನೀಡಿದ್ದನ್ನು ಸಾಬೀತುಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.*ಕಾನೂನುಬದ್ಧ ತನಿಖೆಯ ಸಮರ್ಥನೆ: ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಎನ್ನಲಾದ ಸ್ಟಿಂಗ್ ಆಪರೇಷನ್ ವಿಡಿಯೋ ವಿವಾದದ ತನಿಖೆ ಕುರಿತು ಪ್ರತಿಕ್ರಿಯಿಸಿ, ತನಿಖೆಯು ಕಾನೂನಿನ ಪ್ರಕಾರವೇ ನಡೆಯುತ್ತದೆ ಹೊರತು ಕುಮಾರಸ್ವಾಮಿ ಅಥವಾ ಮಾಧ್ಯಮಗಳು ಹೇಳಿದಂತೆ ಅಲ್ಲ. ನಿಮ್ಮ ಬಳಿ ನಿಜಕ್ಕೂ ದಾಖಲೆಗಳಿದ್ದರೆ ಅದನ್ನು ತನಿಖಾಧಿಕಾರಿಗಳಿಗೆ ನೀಡಲಿ. ತನಿಖೆಯ ವರದಿಗಾಗಿ ಕಾಯುತ್ತಿದ್ದೇವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಖರ್ಗೆ ಹೇಳಿದರು.ಕುಮಾರಸ್ವಾಮಿ ಅವರಿಗೆ ದೆಹಲಿಯಲ್ಲಿ ಯಾವುದೇ ಕೆಲಸವಿಲ್ಲ. ಹಾಗಾಗಿ ಖಾಲಿ ಕುಳಿತುಕೊಂಡು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಸ್ಥಾನದ ಘನತೆಯನ್ನು ಅವರೇ ಕುಗ್ಗಿಸಿಕೊಳ್ಳುತ್ತಿದ್ದಾರೆಂದು ಖರ್ಗೆ ವ್ಯಂಗ್ಯವಾಡಿದರು.