ದುಬೈನ ಒಂದೇ ವೇದಿಕೆಯಲ್ಲಿ ಎಚ್‌ಡಿಕೆ-ಸಿಪಿವೈ!

| Published : Oct 31 2023, 01:16 AM IST

ಸಾರಾಂಶ

ಚನ್ನಪಟ್ಟಣ: ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಚನ್ನಪಟ್ಟಣ: ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ರಾಜಕೀಯವಾಗಿ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿದ್ದ ದಳಪತಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸೈನಿಕ ಖ್ಯಾತಿಯ ಸಿ.ಪಿ.ಯೋಗೇಶ್ವರ್ ಜೆಡಿಎಸ್- ಬಿಜೆಪಿ ಮೈತಿಯ ನಂತರ ದೂರದ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಮಿಷ ಕುರಿತ ಆರೋಪಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದೇ ವೇದಿಕೆಯಲ್ಲಿ ಬದ್ಧ ವೈರಿಗಳು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬದ್ಧ ವೈರಿಗಳು ಎಂದೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ವಿಧಾನಪರಿಷತ್ ಸಾರ್ವತ್ರಿಕ ಚುನಾವಣೆಯ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರಿಗೂ ಸಮಾನ ರಾಜಕೀಯ ಎದುರಾಳಿಯಾದ ಡಿ.ಕೆ.ಶಿವಕುಮಾರ್ ಅವರನ್ನು ಹಣಿಯುವ ನಿಟ್ಟಿನಲ್ಲಿ ಇಬ್ಬರೂ ಕೈಜೋಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿದ್ದ ಡಿ.ಕೆ.ಸುರೇಶ್ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಏಕೈಕ ಸಂಸದ ಎನ್ನಿಸಿದ್ದಾರೆ. ಮುಂದಿನ ವರ್ಷ ಮತ್ತೆ ಲೋಕಸಭೆ ಚುನಾವಣೆ ಎದುರಾಗಲಿದ್ದು, ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಲೇಬೇಕು ಎಂಬ ನಿಟ್ಟಿನಲ್ಲಿ ರಾಜಕೀಯ ವೈರಿಗಳಾಗಿದ್ದ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಪರಸ್ಪರ ಹತ್ತಿರವಾಗಿದ್ದಾರೆ. ಮೈತ್ರಿ ಪಕ್ಷದಿಂದ ಯಾರಿಗೇ ಟಿಕೆಟ್ ದೊರೆತರೂ ಸಹಕರಿಸುವ ಸಂಕಲ್ಪ ಮಾಡಿದ್ದಾರೆ. ಇದೀಗ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮಲ್ಲಿನ ಎಲ್ಲ ಭಿನ್ನಾಭಿಪ್ರಾಯ ಬಗೆಹರಿದಿದೆ ಎಂಬ ಸಂದೇಶ ರವಾನಿಸುವಲ್ಲಿ ಇಬ್ಬರು ಸಫಲರಾಗಿದ್ದಾರೆ. ಪರಸ್ಪರ ಅಂತರ: ಎರಡು ವರ್ಷಗಳ ಹಿಂದೆ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕವಿ ಸಿದ್ದಲಿಂಗಯ್ಯ ಸ್ಮರಣಾರ್ಥ ಹಮ್ಮಿಕೊಂಡಿದ್ದ ನೆನಯೋಣ ಬನ್ನಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಾಗೂ ಸಂಸದ ಡಿ.ಕೆ. ಸುರೇಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಯೋಗೇಶ್ವರ್ ಹಾಗೂ ಸುರೇಶ್ ಪರಸ್ಪರ ಮುಗುಳ್ನಗೆ ಬೀರಿ ಕುಶಲೋಪಚಾರ ವಿಚಾರಿಸಿದ್ದರು. ಆದರೆ, ಕುಮಾರಸ್ವಾಮಿ, ಯೋಗೇಶ್ವರ್ ಕಡೆಗೆ ತಿರುಗಿಯೂ ನೋಡಿರಲಿಲ್ಲ. ಸಿಡಿಮಿಡಿಗೊಳ್ಳುತ್ತಲೇ ಭಾಷಣ ಮುಗಿಸಿದ ಕುಮಾರಸ್ವಾಮಿ ಅನ್ಯ ಕಾರ್ಯಕ್ರಮದ ನಿಮಿತ್ತ ತ್ವರಿತವಾಗಿ ತೆರಳಿದ್ದರು. ಮದಗಜಗಳಂತೆ ಕಾದಾಡಿದ್ದರು: ಈ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಸಹ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಮದಗಜಗಳಂತೆ ಒಬ್ಬರ ವಿರುದ್ಧ ಒಬ್ಬರು ಕಾದಾಡಿದರು. ಕುಮಾರಸ್ವಾಮಿಯನ್ನು ಕ್ಷೇತ್ರದಲ್ಲಿ ಕಟ್ಟಿ ಹಾಕಬೇಕೆಂದು ಯೋಗೇಶ್ವರ್ ಸ್ವಾಭಿಮಾನಿ ನಡಿಗೆ ನಡೆಸಿದರೆ, ಕುಮಾರಸ್ವಾಮಿ ಪಂಚರತ್ನ ಯಾತ್ರೆಯ ಮೂಲಕ ಟಕ್ಕರ್ ನೀಡಿದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆ ನಂತರ ರಾಜ್ಯಮಟ್ಟದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರು ನಾಯಕರು ಪರಸ್ಪರ ಕೈಜೋಡಿಸಿದ್ದರು. ಅನಾರೋಗ್ಯ ನಿಮಿತ್ತ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಯೋಗೇಶ್ವರ್ ಅವರನ್ನು ಭೇಟಿಯಾಗಿ ಕುಶಲೋಪಚಾರ ವಿಚಾರಿಸಿದ್ದರು. ಆದರೆ ಎಲ್ಲಿಯೂ ಒಂದಾಗಿ ಕಾಣಿಸಿಕೊಂಡಿರಲಿಲ್ಲ. ಆಪರೇಷನ್ ವದಂತಿ ನಡುವೆ ಭೇಟಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ಕುರಿತು ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿರುವ ಬಿಜೆಪಿ ಮುಖಂಡರು 50 ಕೋಟಿ ಆಫರ್ ನೀಡಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೊತ್ತಿನಲ್ಲೇ ಆಪರೇಷನ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದ ಯೋಗೇಶ್ವರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ದುಬೈನಲ್ಲಿ ನಡೆದ ಕೆಂಪೇಗೌಡ ಉತ್ಸವದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗಳಿಗೆ ನಾಂದಿ ಹಾಡಿದೆ. ಪೊಟೋ೩೦ಸಿಪಿಟಿ೧,೨: ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪಾಲ್ಗೊಂಡಿರುವುದು.