ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಚೆನ್ನೈ ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್‌ ಆಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಚೆನ್ನೈ ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್‌ ಆಗಲಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯಾಗಿದೆ. ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಮತ್ತು ಅಮೆರಿಕದಿಂದ ಆಗಮಿಸಿದ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರ ಮಾಡಿ ಕುಮಾರಸ್ವಾಮಿ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಭಾನುವಾರ ಬೆಳಗ್ಗೆ ಡಿಸ್ಚಾರ್ಜ್‌ ಆಗುವ ಕುಮಾರಸ್ವಾಮಿ ಅವರು ಬೆಳಗ್ಗೆ 7.30ಕ್ಕೆ ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಜೆ.ಪಿ.ನಗರದ ನಿವಾಸಕ್ಕೆ ತೆರಳಲಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಬಳಿಕ ಕೆಲ ದಿನ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ನಂತರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಸ್ಪತ್ರೆಯಿಂದ ಆಗಮಿಸುತ್ತಿದ್ದಂತೆ ಜೆಡಿಎಸ್‌ಗೆ ಲಭ್ಯವಾಗಿರುವ ಮೂರು ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.