ಎಚ್ಡಿಕೆ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ: ಯೋಗೇಶ್ವರ್‌

| Published : Nov 09 2024, 01:06 AM IST

ಸಾರಾಂಶ

ಚನ್ನಪಟ್ಟಣ: ಯಾಕೋ ಏನೋ ಗೊತ್ತಿಲ್ಲ ಕುಮಾರಸ್ವಾಮಿ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ. ಅನಿತಾ ಕುಮಾರಸ್ವಾಮಿ ಆಯ್ತು, ಕುಮಾರಸ್ವಾಮಿ ಆಯ್ತು ಈಗ ನಿಖಿಲ್ ಕುಮಾರಸ್ವಾಮಿ ಅವರನ್ನು ತಂದು ನನ್ನ ಎದುರು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ: ಯಾಕೋ ಏನೋ ಗೊತ್ತಿಲ್ಲ ಕುಮಾರಸ್ವಾಮಿ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ. ಅನಿತಾ ಕುಮಾರಸ್ವಾಮಿ ಆಯ್ತು, ಕುಮಾರಸ್ವಾಮಿ ಆಯ್ತು ಈಗ ನಿಖಿಲ್ ಕುಮಾರಸ್ವಾಮಿ ಅವರನ್ನು ತಂದು ನನ್ನ ಎದುರು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಚಕ್ಕರೆ, ಹೊನ್ನನಾಯಕನಹಳ್ಳಿಯಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದರೇ ಸಿಎಂ ಆಗಿ ಏನೋ ಅಭಿವೃದ್ಧಿ ಮಾಡುತ್ತಾರೆ ಎಂದು ಜನ ಎರಡು ಬಾರಿ ಅವರನ್ನು ಗೆಲ್ಲಿಸಿದರು. ಸಿಎಂ ಆದರೂ ಅವರು ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ, ಮತ್ತೊಮ್ಮೆ ಶಾಸಕರನ್ನಾಗಿ ಮಾಡಿದಿರಿ. ಕ್ಷೇತ್ರವನ್ನೇ ಬಿಟ್ಟು ಮಂಡ್ಯಕ್ಕೆ ಹಾರಿ ಕೇಂದ್ರ ಮಂತ್ರಿಯಾದರು. ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ ಎಂದು ಆರೋಪಿಸಿದರು. ಕಳೆದ ೨೦-೨೫ ವರ್ಷದಿಂದ ನೀವು ನನ್ನನ್ನ ನೋಡಿದ್ದೀರಿ. ನಾನು ಜನಸೇವೆ ಪ್ರಾರಂಭ ಮಾಡಿದ ನಂತರ ಶಾಶ್ವತ ಕೆಲಸ ಮಾಡಿದ್ದೇನೆ. ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡು ಇದ್ದೆ. ಆದರೆ ಎಚ್‌ಡಿಕೆ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ ಎಂದರು.

ಕ್ಷೇತ್ರಕ್ಕೆ ಅಗತ್ಯವಾಗಿದ್ದ ನೀರಾವರಿ ಯೋಜನೆಯನ್ನು ಜಾರಿಗೊಳಿಸಿ, ರೈತರ ಬದುಕು ಹಸನು ಮಾಡಿದ್ದೇನೆ. ನಾನು ಪ್ರಾಮಾಣಿಕವಾಗಿ ಬರ ನೀಗಿಸುವ ಕೆಲಸ ಮಾಡಿದ್ದೇನೆ. ಮೊನ್ನೆ ಸಿಎಂ ಬಂದಾಗಲೂ ನಮ್ಮ ತಾಲೂಕಿನ ಹಸಿರಿನ ಬಗ್ಗೆ ಹೇಳಿದರು. ನಾನು ನಮ್ಮ ತಾಲೂಕಿನ ಹೈನುಗಾರಿಕೆ ಬಗ್ಗೆಯೂ ಅವರ ಜೊತೆ ಮಾತನಾಡಿದೆ. ರೈತರಿಗೆ ಹಾಲಿದ ದರ ಹೆಚ್ಚಿಸಲು ಸಿಎಂಗೆ ಮನವಿ ಮಾಡಿದ್ದೇನೆ. ಸಿಎಂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ಕೊಟ್ಟಿದ್ದಾರೆ ಎಂದರು.

ನಾನು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ, ನಮ್ಮ ಜಿಲ್ಲೆಯ ಡಿಸಿಎಂ ಡಿಕೆಶಿ ಅಭಿವೃದ್ಧಿಗೆ ಒತ್ತು ಕೊಡ್ತಿದ್ದಾರೆ. ನಾನು ಶಾಸಕನಾದರೆ ಈ ತಾಲೂಕು ಮತ್ತಷ್ಟು ಅಭಿವೃದ್ಧಿ ಆಗುತ್ತೆ ಎಂದು ಕಾಂಗ್ರೆಸ್ ಸೇರಿದ್ದೇನೆ. ಹಾಗಾಗಿ ಈ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಪೊಟೋ೮ಸಿಪಿಟಿ೬:

ಚನ್ನಟಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್ವರ್ ಮಾತನಾಡಿದರು.