ಚನ್ನಪಟ್ಟಣದಲ್ಲಿ ಎಚ್‌ಡಿಕೆ ಸಾಕ್ಷಿಗುಡ್ಡೆ ಬಿಟ್ಟಿಲ್ಲ: ಸಿಪಿವೈ

| Published : Nov 11 2024, 12:58 AM IST

ಸಾರಾಂಶ

ಚನ್ನಪಟ್ಟಣ: ಎರಡು ಅವಧಿಗೆ ಕ್ಷೇತ್ರದ ಶಾಸಕರಾಗಿದ್ದ ಇಲ್ಲಿಂದಲೇ ಸಿಎಂ ಆದ ಕುಮಾರಸ್ವಾಮಿ ಯಾವುದೇ ಸಾಕ್ಷಿಗುಡ್ಡೆಯನ್ನು ಬಿಟ್ಟಿಲ್ಲ. ಮುಖ್ಯಮಂತ್ರಿ, ಶಾಸಕರಾಗಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ತಾಲೂಕಿಗೆ ಅವರು ಅನ್ಯಾಯ ಮಾಡಿರುವುದರಿಂದ ಜನರು ಅವರ ಮಗನನ್ನು ಹೊರಕ್ಕೆ ಕಳುಹಿಸಿ ಚನ್ನಪಟ್ಟಣದ ಸ್ವಾಭಿಮಾನ ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮನವಿ ಮಾಡಿದರು.

ಚನ್ನಪಟ್ಟಣ: ಎರಡು ಅವಧಿಗೆ ಕ್ಷೇತ್ರದ ಶಾಸಕರಾಗಿದ್ದ ಇಲ್ಲಿಂದಲೇ ಸಿಎಂ ಆದ ಕುಮಾರಸ್ವಾಮಿ ಯಾವುದೇ ಸಾಕ್ಷಿಗುಡ್ಡೆಯನ್ನು ಬಿಟ್ಟಿಲ್ಲ. ಮುಖ್ಯಮಂತ್ರಿ, ಶಾಸಕರಾಗಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ತಾಲೂಕಿಗೆ ಅವರು ಅನ್ಯಾಯ ಮಾಡಿರುವುದರಿಂದ ಜನರು ಅವರ ಮಗನನ್ನು ಹೊರಕ್ಕೆ ಕಳುಹಿಸಿ ಚನ್ನಪಟ್ಟಣದ ಸ್ವಾಭಿಮಾನ ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮನವಿ ಮಾಡಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ ಅವರು, ಚನ್ನಪಟ್ಟಣ ಬೇಡ ಎಂದು ಹೋದವರು ಈಗ ಮಗನ ಪರ ಮತ ಕೇಳಲು ಬಂದಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನತೆಗೆ ಮೋಸ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗಲೂ ಚನ್ನಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸಲಿಲ್ಲ. ಒಳಚರಂಡಿ, ಶೌಚಾಲಯ, ಕುಡಿಯುವ ನೀರು, ಬಸ್ ನಿಲ್ದಾಣ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಬರೀ ಕಣ್ಣೀರಾಕಿಕೊಂಡು ಭಾವನಾತ್ಮಕ ಮಾತುಗಳನ್ನಾಡಿ ವೋಟ್ ಪಡೆಯುತ್ತಿದ್ದರು ಎಂದರು.

ಆರೇಳು ವರ್ಷದಿಂದ ಕುಮಾರಸ್ವಾಮಿ ಮಾಡಿದ ಅದ್ವಾನದಿಂದ ಚನ್ನಪಟ್ಟಣ ಗಬ್ಬು ನಾರುತ್ತಿದೆ. ಅವರ ಮೇಲೆ ಜನ ರೋಸಿಹೋಗಿದ್ದಾರೆ. ಚನ್ನಪಟ್ಟಣದಲ್ಲಿ ನನ್ನ ಬಗ್ಗೆ ಉತ್ತಮ ವಾತಾವರಣ ಇದೆ. ನಾನು ಶಾಸಕ ಆಗಿದ್ದಾಗ ಕೆಲವೊಂದಿಷ್ಟು ಕೆಲಸ ಮಾಡಿದ್ದೇನೆ. ನನಗೆ ಗೆಲುವು ಸಿಗುವ ಆಶಾದಾಯಕ ವಾತಾವರಣ ಇದೆ. ನಾನು ಶಾಸಕನಾಗಿದ್ದಾಗ ಕ್ಷೇತ್ರದ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಿದ್ದೇನೆ. ನಿರಂತರ ಶ್ರಮದಿಂದ ಈ ಭಾಗದ ಕೆರೆಗಳಿಗೆ ನೀರು ಬಂದಿತ್ತು. ಆದರೆ ಕುಮಾರಸ್ವಾಮಿ ಮಾತಿನಿಂದ ಕೆರೆ ತುಂಬಿಸಿದರೆ ಹೊರತು ಏನೂ ಮಾಡಲಿಲ್ಲ. ಅವರಿಗೆ ಅವರ ಮಗನಿಗೆ ಹಳ್ಳಿಗಳ ಹೆಸರು ಸರಿಯಾಗಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ಅಭಿವೃದ್ಧಿಗೆ ನಾನು ಸಾಕಷ್ಟು ಕನಸು ಕಟ್ಡಿಕೊಂಡಿದ್ದೇನೆ. ನನ್ನನ್ನು ಜನ ಆಯ್ಕೆ ಮಾಡಿದರೆ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಕಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಕಾಂಗ್ರೆಸ್ ಶಾಸಕ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗಲಿದೆ. ಕೃಷಿ, ಹೈನೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲ. ರೈತಪರ ಅನೇಕ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಬಾಕ್ಸ್

ನಗರ ವ್ಯಾಪ್ತಿಯಲ್ಲಿ ಸಿಪಿವೈ ಬಿರುಸಿನ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ನಗರದ ವಿವಿಧ ವಾರ್ಡ್‌ಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಎಲೆಕೇರಿಯಿಂದ ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದರು. ಚನ್ನಪಟ್ಟಣ ನಗರ ವ್ಯಾಪ್ತಿಯ ಎಲೆಕೇರಿ, ಡೂಮ್ ಲೈಟ್ ಸರ್ಕಲ್, ಹನುಮಂತನಗರ, ತಟ್ಟೆಕೆರೆ, ಪೇಟೆಚೇರಿ ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಈ ವೇಳೆ ಮಹಿಳೆಯರು ಆರತಿ ಎತ್ತಿ, ಕಾರ್ಯಕರ್ತರು ಪುಷ್ಪವೃಷ್ಠಿ ಸುರಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ, ಈ ವೇಳೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ,ರೇವಣ್ಣ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ಹಲವಾರು ನಾಯಕರು, ಸ್ಥಳೀಯ ಮುಖಂಡರು ಯೋಗೇಶ್ವರ್ ಪರ ಮತಯಾಚಿಸಿದರು.

ಬಾಕ್ಸ್.................

ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ಸರ್ಕಾರ ದಿವಾಳಿ ಆಗುವುದಿಲ್ಲವೇ: ಕಿಮ್ಮನೆ

ಚನ್ನಪಟ್ಟಣ ಬಡವರಿಗೆ ಕಾರ್ಯಕ್ರಮ ಮಾಡಿದರೆ ಸರ್ಕಾರ ದಿವಾಳಿ ಆಗುತ್ತದೆ ಅನ್ನುವ ಬಿಜೆಪಿಯವರು ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ಸರ್ಕಾರ ದಿವಾಳಿ ಆಗುವುದಿಲ್ಲವೇ ಎಂದು ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಬಡವರ ಪರ ಕಾರ್ಯಕ್ರಮ ಮಾಡಿದರೆ ಅವರಿಗೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಉತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದರಿಂದ ಜನ ನಮ್ಮ ಪರ ಇದ್ದಾರೆ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೊಟೋ೧೦ಸಿಪಿಟಿ೪:

ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಯೋಗೇಶ್ವರ್ ಅವರಿಗೆ ಬೆಂಬಲಿಗರು ಬೃಹತ್ ಹಾರ ಹಾಕಿ ಸ್ವಾಗತಿಸಿದರು.

ಪೊಟೋ೧೦ಸಿಪಿಟಿ೫:

ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಯೋಗೇಶ್ವರ್ ಪ್ರಚಾರ ನಡೆಸಿದರು.