ಸಾರಾಂಶ
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾರು ಗೆದ್ದರೂ ಬದಲಾವಣೆಯಾಗದು, ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತೆ. ಡಿ.ಕೆ.ಶಿವಕುಮಾರ್ ಜೊತೆ ಸೇರಿ ಅವರು ಕೆಲಸ ಮಾಡುವರು. ಲೋಕಸಭಾ ಚುನಾವಣೆಯಲ್ಲಿ ಡಿ. ಕೆ.ಸುರೇಶ್ ಸೋತಿದ್ದರು,
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕೇಂದ್ರ ಸಚಿವರಾಗುವ ಆಸೆಯಿಂದ ಕುಮಾರಸ್ವಾಮಿ ಚನ್ನಪಟ್ಟಣವನ್ನು ತ್ಯಜಿಸಿದ್ದಾರೆ. ಕುಮಾರಸ್ವಾಮಿ ಸ್ವಾರ್ಥ ರಾಜಕಾರಣಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಸ್ಥಾನ ಜನರ ಸಮಸ್ಯೆ ಅರಿಯಲು, ಜನರಿಗಾಗಿ ಉತ್ತಮ ಕೆಲಸ ಮಾಡಲು ಉತ್ತಮ ಸ್ಥಾನ, ಆ ಸ್ಥಾನವು ಮುಖ್ಯಮಂತ್ರಿ ಸ್ಥಾನಕ್ಕೆ ಸಮ. ಅಂತಹ ಸ್ಥಾನ ತ್ಯಜಿಸಿ, ಮಂಡ್ಯದಲ್ಲಿ ಮತ ಪಡೆದು ಕೇಂದ್ರ ಮಂತ್ರಿಯಾಗಿ ಸ್ವಾರ್ಥ ಮೆರೆದಿದ್ದಾರೆ ಎಂದು ಕುಟುಕಿದರು.
ಅವರು ನಿಮ್ಮನ್ನು ತ್ಯಜಿಸಿ ಹೋದಮೇಲೆ ಕ್ಷೇತ್ರದ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಮಾಜಿ ಸಂಸದ ಡಿ. ಕೆ.ಸುರೇಶ್ ಪಣತೊಟ್ಟಿದ್ದಾರೆ. ಚನ್ನಪಟ್ಟಣದ ಅಭಿವೃದ್ಧಿಗೆ ೫೦೦ ಕೋಟಿ ರು. ಹಣ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರ ಇಲ್ಲಸಲ್ಲದ ಆರೋಪಗಳಿಗೆ ಕಿವಿಕೊಡದೆ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಬೆಂಬಲಿಸುವಂತೆ ಮನವಿ ಮಾಡಿದರು.ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿಗಳ ಮೂಲಕ ಸಾಕಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ೫ ಲಕ್ಷ ಬಡ್ಡಿ ರಹಿತ ಸಾಲ, ಕೃಷಿ ಇಲಾಖೆ ಮೂಲಕ ೨೧೦೦ ಕೋಟಿ ರು. ಪರಿಹಾರ ಒದಗಿಸಿದ್ದು, ೮೦ ಲಕ್ಷ ರೈತರಿಗೆ ಪರಿಹಾರ ದೊರೆತಿದೆ, ೧೦೦೦ ಕೋಟಿ ರು. ಮೌಲ್ಯದ ಯಂತ್ರೋಪಕರಣಗಳನ್ನು, ಆದ್ಯತೆಗೆ ಮೇರೆಗೆ ಸಬ್ಸಿಡಿ ದರದಲ್ಲಿ ನೀಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾರು ಗೆದ್ದರೂ ಬದಲಾವಣೆಯಾಗದು, ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತೆ. ಡಿ.ಕೆ.ಶಿವಕುಮಾರ್ ಜೊತೆ ಸೇರಿ ಅವರು ಕೆಲಸ ಮಾಡುವರು. ಲೋಕಸಭಾ ಚುನಾವಣೆಯಲ್ಲಿ ಡಿ. ಕೆ.ಸುರೇಶ್ ಸೋತಿದ್ದರು, ಆದರೂ ಅವರು ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಈಗ ಯೋಗೇಶ್ವರ್ ಜೊತೆ ಸೇರಿ ಕೆಲಸ ಮಾಡಲು ಸಿದ್ದರಿದ್ದಾರೆ ಎಂದರು.ಉಪಚುನಾವಣೆಯಲ್ಲಿ ಕೆಲವರು ಜಾತಿ ವಿಂಗಡಣೆ ಮಾಡುತ್ತಾರೆ, ಇದಕ್ಕೆ ಯಾರು ಕಿವಿ ಕೊಡಬೇಡಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಲೋಕಸಭಾ ಮಾಜಿ ಸದಸ್ಯ ಡಿ. ಕೆ.ಸುರೇಶ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಂಡ್ಯ ಶಾಸಕ ಪಿ. ರವಿಕುಮಾರ್ ಗೌಡ ಸೇರಿದಂತೆ ಇತರ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.