ಸಾರಾಂಶ
ಚನ್ನಪಟ್ಟಣ:ಉಪಚುನಾವಣೆಯಲ್ಲಿ ಪುತ್ರ, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಕೇಂದ್ರ ಸಚಿವ ಕುಮಾರಸ್ವಾಮಿ ಪಣತೊಟ್ಟಿದ್ದು, ನಿರ್ಣಾಯಕವೆನಿಸಿರುವ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ರಣತಂತ್ರ ಹಣೆಯುಲು ಮುಂದಾಗಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಕಾರಣಕ್ಕೆ ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಆತಂಕ ಜೆಡಿಎಸ್‌ಗೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರ ಜತೆಗೆ ಬಿಡದಿಯ ತೋಟದ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ.೩೦ ಸಾವಿರ ಮತ:
ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ 30 ಸಾವಿರ ಅಲ್ಪಸಂಖ್ಯಾತ ಸಮುದಾಯದ ಮತಗಳಿದ್ದು, ಚುನಾವಣೆಯಲ್ಲಿ ಅದನ್ನು ಹೆಚ್ಚಾಗಿ ಪಡೆದವರು ಜಯಗಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿರುವ ಎಚ್‌ಡಿಕೆ, ಆ ಮತಗಳನ್ನು ಆದಷ್ಟು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಚುನಾವಣಾ ವ್ಯೂಹ ರಚಿಸಲು ಮುಂದಾಗಿದ್ದಾರೆ.ಕ್ಷೇತ್ರದಲ್ಲಿ ಈ ಹಿಂದೆ ನಡೆದ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕ ವಹಿಸಿವೆ. ೨೦೦೯ರಿಂದ ಕ್ಷೇತ್ರದ ಅಲ್ಪಸಂಖ್ಯಾತರು ಜೆಡಿಎಸ್ ಪರವಾಗಿದ್ದರು. ೨೦೦೯ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವತ್ಥ್ ಅಲ್ಪಮತಗಳ ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
೨೦೧೮ ಹಾಗೂ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ದೊಡ್ಡ ಮಟ್ಟದಲ್ಲಿ ಕೈಹಿಡಿದಿದ್ದರು. ಆ ಎರಡು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು ಎಂಬ ಕಾರಣಕ್ಕೆ ಸಂಪೂರ್ಣವಾಗಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದರು. ಆ ಎರಡು ಚುನಾವಣೆಗಳಲ್ಲಿ ಕುಮಾರಸ್ವಾಮಿ ನಿರಾಯಾಸವಾಗಿ ಗೆಲುವು ಸಾಧಿಸುವಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು.೨೦೧೮ರ ಚುನಾವಣೆಯಲ್ಲಿ ಎಚ್‌ಡಿಕೆ ೨೧,೫೩೦ ಮತಗಳಿಂದ ತಮ್ಮ ಪ್ರತಿಸ್ಪರ್ಧಿ ಯೋಗೇಶ್ವರ್ ಅವರ ವಿರುದ್ಧ ಜಯಗಳಿಸಿದ್ದರೆ, ೨೦೨೩ರಲ್ಲಿ ೧೫,೯೧೫ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಎರಡು ಚುನಾವಣೆಗಳಲ್ಲೂ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಪರ ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಗೊಂಡಿತ್ತು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಎನ್‌ಡಿಎ ಕೂಟ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಚಲಾವಣೆಗೊಂಡಿವೆ. ಇದು ದಳಪತಿಗೆ ಆತಂಕ ತರಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಹೋಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ.ಬಿಜೆಪಿ ಕಾರಣಕ್ಕೆ ಜೆಡಿಎಸ್‌ನಿಂದ ಅಲ್ಪಸಂಖ್ಯಾತರು ದೂರ ಸರಿಯುವ ಆತಂಕ ಎಚ್‌ಡಿಕೆಗೆ ಎದುರಾಗಿದೆ. ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ನಿಂದ ಗೆದ್ದಿದ್ದ ಅಲ್ಪಸಂಖ್ಯಾತ ನಗರಸಭೆ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ ಅಲ್ಪಸಂಖ್ಯಾತ ಮತಗಳನ್ನು ಕ್ರೋಡೀಕರಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರ ನಡೆಸಿರುವ ಅವರು ಕ್ಷೇತ್ರದಲ್ಲೇ ಬೀಡುಬಿಟ್ಟು ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವಂತೆ ಮುಖಂಡರಿಗೆ ಟಾಸ್ಕ್ ನೀಡಿದ್ದಾರೆ.
ಈ ವೇಳೆ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪೊಟೋ೨೮ಸಿಪಿಟಿ೩,೪,:
ಬಿಡದಿಯ ತೋಟದ ಮನೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಲ್ಪಸಂಖ್ಯಾತ ಮುಖಂಡರ ಜತೆ ಸಭೆ ನಡೆಸಿದರು.