ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾವತಿಯಲ್ಲಿನ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸಿರುವ ಜಿಲ್ಲಾ ಜೆಡಿಎಸ್, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸತತ ಪ್ರಯತ್ನದ ಫಲವಾಗಿ ಕಾರ್ಖಾನೆಗೆ ಮರುಜೀವ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಕಾರ್ಖಾನೆ ಬಹುತೇಕ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು. ಕಾರ್ಖಾನೆಯನ್ನೇ ನಂಬಿಕೊಂಡಿದ್ದಂತಹ ಸಾವಿರಾರು ಕುಟುಂಬಗಳು ದಿಕ್ಕು ತೋಚದಂತಾಗಿದ್ದವು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ಪುನರ್ಜೀವನ ನೀಡಲು ಕೈಗಾರಿಕಾ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಿದ್ದರ ಫಲವಾಗಿ ಇದೀಗ ಕಾರ್ಖಾನೆ ಪುನಶ್ಚೇತನಕ್ಕೆ ಒಪ್ಪಿಗೆ ನೀಡಿದೆ ಎಂದರು.
ಕಾರ್ಖಾನೆ ಪುನಶ್ಚೇತನಕ್ಕೆ ಮೊದಲ ಹಂತದಲ್ಲಿ 10 ಸಾವಿರ ಕೋಟಿ ರು. ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕಾರ್ಖಾನೆಯನ್ನು ಸಂಪೂರ್ಣ ಪುನಶ್ಚೇತನಗೊಳಿಸಲು ಹಾಗೂ ನವೀನ ತಂತ್ರಜ್ಞಾನ, ಆಧುನಿಕ ಯಂತ್ರೋಪಕರಣ ಅಳವಡಿಸಲು ಸಾಕಷ್ಟು ಹಣಕಾಸಿನ ಅವಶ್ಯಕತೆ ಇದೆ. ಈ ಪ್ರಯತ್ನ ಕೂಡ ನಡೆದಿದೆ ಎಂದರು.ಕಾರ್ಖಾನೆ ಪುನಶ್ಚೇತನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕ ದಿ. ಅಪ್ಪಾಜಿಗೌಡ ಸೇರಿದಂತೆ ಹಲವರ ಪ್ರಯತ್ನವಿದೆ. ಇವರೆಲ್ಲರಿಗೂ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.
ಅಲ್ಲದೆ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಭದ್ರಾವತಿ-ಚಿಕ್ಕಜಾಜೂರು ನಡುವೆ ರೈಲ್ವೆ ಸಂಪರ್ಕಕ್ಕೆ ಅನುಮತಿ ದೊರಕಿದೆ. ರಾಜ್ಯದ ಹೆಮ್ಮೆಯ ಎಚ್ ಎಂಟಿ ಕಾರ್ಖಾನೆಯನ್ನು ಪುನರಾರಂಭಿಸುವ ನಿಟ್ಟಿನಲ್ಲೂ ಮಾತುಕತೆ ನಡೆದಿದೆ ಎಂದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮಾತನಾಡಿ, ಕ್ಯಾನ್ಸರ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರಕುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ದೀಪಕ್ ಸಿಂಗ್, ಉಮಾಶಂಕರ ಉಪಾಧ್ಯಾಯ, ಕಾಂತರಾಜ್, ಗೀತಾ ಸತೀಶ್, ಸಂಜಯ್ ಕಶ್ಯಪ್, ಗೋಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.