ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ

| Published : Apr 05 2024, 01:00 AM IST

ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜನರಿಗೆ ದ್ರೋಹ ಬಗೆದರೆ ದೇವರಿಗೆ ದ್ರೋಹ ಬಗೆದಂತೆ: ಮಾಜಿ ಸಿಎಂಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್-ಬಿಜೆಪಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾಡಿನ ನೀರಾವರಿ ಯೋಜನೆಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ದನಿಯೆತ್ತಬೇಕಿದೆ. ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಜನರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ಅದಕ್ಕಾಗಿ ದೇವೇಗೌಡರ ಮಾದರಿಯಲ್ಲಿ ರೈತರಿಗೆ ಧ್ವನಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಕೋರಲು ನಿಮ್ಮ ಮುಂದೆ ನಿಂತಿರುವುದಾಗಿ ಹೇಳಿದರು.

ಮೈತ್ರಿ ವೈಯಕ್ತಿಕ ಲಾಭಕ್ಕಲ್ಲ:

ನಾನು ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಂಸತ್ ಸದಸ್ಯರಿಗೆ ದನಿ ತುಂಬುವ ಸಲುವಾಗಿ ಮೈತ್ರಿ ಮಾಡಿಕೊಂಡಿದ್ದೇನೆ. ೨೮ ಸ್ಥಾನಗಳಲ್ಲಿ ಮೈತ್ರಿ ಪಕ್ಷಕ್ಕೆ ಗೆಲ್ಲಿಸಿಕೊಟ್ಟರೆ ರಾಜ್ಯದ ನೀರಾವರಿ ಯೋಜನೆಗಳಿಗೆ ನ್ಯಾಯ ಒದಗಿಸಲು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ನಮ್ಮ ರೈತರ ಬೆಳೆಗಳು ಒಣಗಲು ಬಿಟ್ಟು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಕಬ್ಬಿಗೆ ನೀರು ಕೊಡಲು ನಿಮಗೆ ಯೋಗ್ಯತೆ ಇಲ್ಲ. ‘ನಮ್ಮ ನೀರು, ನಮ್ಮ ಹಕ್ಕು’ ಅಂತೆಲ್ಲಾ ಘೋಷಣೆ ಕೂಗುತ್ತೀರಿ, ಪಾದಯಾತ್ರೆ ಮಾಡುತ್ತೀರಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ನಮ್ಮ ನೀರು-ನಮ್ಮ ಹಕ್ಕಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ನಂಬಿದವರಿಗೆ ದ್ರೋಹ ಮಾಡಲಾರೆ:

ನನ್ನನ್ನು ನಂಬಿರುವ ಜನರಿಗೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ. ನಿಮಗೆ ದ್ರೋಹ ಬಗೆದರೆ ದೇವರಿಗೆ ದ್ರೋಹ ಬಗೆದಂತೆ. ನನಗೆ ಆಶೀರ್ವಾದ ಮಾಡಿ ಕಳುಹಿಸಿ. ಪಂಚರತ್ನ ಯೋಜನೆಗಳ ಜಾರಿಗಾಗಿ ಒಂದು ಅವಕಾಶ ಕೇಳಿದ್ದೆ. ನಾಡಿನ ಜನ ಇನ್ನೂ ನನ್ನನ್ನು ಸಂಪೂರ್ಣವಾಗಿ ನಂಬಲಿಲ್ಲ. ಈಗ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ. ರೈತರ ಪರ ದನಿಯಾಗಿ ಕೆಲಸ ಮಾಡುತ್ತೇನೆ.

ಚಿತ್ರಶೀರ್ಷಿಕೆಗಳು

೪ಕೆಎಂಎನ್‌ಡಿ-೧

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಗೋವಾ ಸಿಎಂ ಪ್ರಮೋದ್ ಸಾವಂತ್ ಕೈಎತ್ತಿ ಒಗ್ಗಟ್ಟು ಪ್ರದರ್ಶಿಸಿದರು.