ರಾಮನಗರ: ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಅನಗತ್ಯವಾಗಿ ಮೂಡಿಸುತ್ತಿರುವವರ ವಿರುದ್ಧ ಕಿಡಿಕಾರಿದರಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರೊಂದಿಗೆ ನೇರವಾಗಿ ಚರ್ಚೆಗೆ ಬರಲಿ ಎಂದು ಭೂ ಮಾಲೀಕರು ಸವಾಲು ಹಾಕಿದರು.

ರಾಮನಗರ: ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಅನಗತ್ಯವಾಗಿ ಮೂಡಿಸುತ್ತಿರುವವರ ವಿರುದ್ಧ ಕಿಡಿಕಾರಿದರಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರೊಂದಿಗೆ ನೇರವಾಗಿ ಚರ್ಚೆಗೆ ಬರಲಿ ಎಂದು ಭೂ ಮಾಲೀಕರು ಸವಾಲು ಹಾಕಿದರು.

ಬಿಡದಿ ಹೋಬಳಿಯ ಹೊಸೂರು ಗ್ರಾಮದಲ್ಲಿ ಗುರುವಾರ ಸಂಜೆ ಸಭೆ ನಡೆಸಿದ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು, ಬಿಡದಿ ಟೌನ್ ಶಿಪ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿ ಯೋಜನೆಗೆ ಅಡ್ಡಿ ಪಡಿಸುತ್ತಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇರವಾಗಿ ರೈತರೊಂದಿಗೆ ಚರ್ಚೆಗೆ ಬರಲೆಂದು ಪಂಥಾಹ್ವಾನ ನೀಡಿದರು.

ಈ ಯೋಜನೆ ವಿಚಾರದಲ್ಲಿ ವಿರುದ್ಧವಾಗಿರುವ ವ್ಯಕ್ತಿಗಳು ಸೈದ್ಧಾಂತಿಕ ಹೋರಾಟ ಮಾಡುವುದನ್ನು ಬಿಟ್ಟು ಸುಳ್ಳು ಸುದ್ದಿ ಹರಡಿಸುವಲ್ಲಿ ನಿರತರಾಗಿದ್ದಾರೆ. ಆ ಮೂಲಕ ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಬೇಡದ ವ್ಯಕ್ತಿಗಳ ಮಾತುಗಳಿಗೆ ಮರಳಾಗದೆ ರೈತರು ಯೋಜನೆಯೊಂದಿಗೆ ಕೈಜೋಡಿಸಬೇಕು. ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಿಡದಿ ಸೇರಿದಂತೆ 5 ಟೌನ್‌ಶಿಪ್ ಗಳನ್ನು ಘೋಷಿಸಿದರು. ಆಗ ಪ್ರತಿಭಟನೆ ಹಾದಿ ಹಿಡಿದ ರೈತರ ಸಭೆ ಕರೆದು ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದರು. ಅಲ್ಲದೆ, ಡಿಎಲ್‌ಎಫ್ ಸಂಸ್ಥೆಯಿಂದ 300 ಕೋಟಿ ರು.ಗಳನ್ನು ಯೋಜನೆಗಾಗಿ ಪಡೆದು ಈ ಭಾಗದ ಜಮೀನನ್ನು ರೆಡ್ ಜೋನ್ (ಕೆಂಪುವಲಯ)ವಾಗಿ ಘೋಷಿಸಿದರು. ಆಗ ಯಾವ ರೈತರು ವಿರೋಧ ಮಾಡದಿದ್ದರೂ ಏಕಾಏಕಿ ಯೋಜನೆಯನ್ನು ಕೈಬಿಡಲಾಯಿತು.

ಆದರೆ, ಈ ಭಾಗ ರೆಡ್ ಜೋನ್ ಆಗಿಯೇ ಉಳಿಯಿತು. ಇದರಿಂದಾಗಿ ಕಳೆದ 20 ವರ್ಷದಿಂದ ನಮ್ಮ ರೈತರು ಅನುಭವಿಸಿದ ಕಷ್ಟ ಒಂದೆರಡಲ್ಲ. ರೆಡ್ ಜೋನ್ ನಿಂದಾಗಿ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಲಿಲ್ಲ. ಶಾಲೆ, ಆಸ್ಪತ್ರೆ, ಕಾಲೇಜು, ಮೂಲಸೌಲಭ್ಯ ಸಿಗಲಿಲ್ಲ. ಒಂದು ಪೆಟ್ರೋಲ್ ಬಂಕ್ ತೆರೆಯುವುದೂ ಅಸಾಧ್ಯವಾಯಿತು. ಅಲ್ಲದೆ, ರೈತರ ಭೂಮಿಗೆ ಬೆಲೆ ಸಿಗದೆ ಮಕ್ಕಳ ಮದುವೆ ಮತ್ತು ಶುಭ ಕಾರ್ಯಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ಮಾರಿಕೊಂಡು ನಷ್ಟ ಅನುಭವಿಸಿದರು ಎಂದು ರೈತರು ಕಿಡಿಕಾರಿದರು.

ಈಗ ಕಾಂಗ್ರೆಸ್ ಸರ್ಕಾರ ಬಿಡದಿ ಉಪನಗರ ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡಿದೆ. ರೈತರನ್ನೂ ಸಮಾನವಾಗಿ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದೆ. ಆದರೆ, ಈ ಯೋಜನೆಯನ್ನು ಘೋಷಿಸಿದ್ದ ಕುಮಾರಸ್ವಾಮಿ ಈಗೇಕೆ ವಿರೋಧ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅಂದು ಯೋಜನೆಯನ್ನು ಘೋಷಿಸಿದ್ದು ಏಕೆ. ಇಂದು ಕೈಬಿಡುವಂತೆ ಹೇಳುತ್ತಿರುವುದು ಏಕೆ? ರೈತರಿಗೆ ಆದ ನಷ್ಟಕ್ಕೆ ಯಾರು ಹೊಣೆ? ಈ ಬಗ್ಗೆ ಕುಮಾರಸ್ವಾಮಿರವರು ರೈತರೊಂದಿಗೆ ನೇರವಾಗಿ ಚರ್ಚೆಗೆ ಬರಲಿ. ನಾವುಗಳು ಚರ್ಚೆಗೆ ಸಿದ್ದರಿದ್ದೇವೆ ಎಂದು ರೈತರು ಹೇಳಿದರು.

ಜಿಲ್ಲಾಡಳಿತ ಪ್ರತಿ ಎಕರೆಗೆ 2 ಕೋಟಿ 7ಲಕ್ಷ ಪ್ರಾರಂಭ ಬೆಲೆಯನ್ನು ಪರಿಹಾರ, 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ/ನಿವೇಶನ ಕೊಡುವುದಾಗಿ ಘೋಷಿಸಿದೆ. ಈ ಕಾರಣಕ್ಕಾಗಿ ನಾವು ಕೊಟ್ಟ ಮಾತಿನಂತೆ ನಡೆದು ಕೊಂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ , ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಭೂ ಮಾಲೀಕರು ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ. ರಾಜಣ್ಣ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ಕಲ್ಯಾಣಕುಮಾರಿ, ಭೈರಮಂಗಲದ ವಿಎಸ್ಎಸ್ಎನ್ ಅಧ್ಯಕ್ಷ ಎಚ್.ಸಿ.ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಮುಖಂಡರಾದ ಹೊಸೂರು ಕೃಷ್ಣಮೂರ್ತಿ, ಗೌತಮ್ , ಭೈರಾರೆಡ್ಡಿ ಸೇರಿದಂತೆ ನೂರಾರು ಭೂ ಮಾಲೀಕರು ಪಾಲ್ಗೊಂಡಿದ್ದರು.

5ಕೆಆರ್ ಎಂಎನ್ 6,7.ಜೆಪಿಜಿ

6.ಬಿಡದಿ ಹೋಬಳಿಯ ಹೊಸೂರು ಗ್ರಾಮದಲ್ಲಿ ಗುರುವಾರ ಸಂಜೆ ಭೂ ಮಾಲೀಕರು ಸಭೆ ನಡೆಸಿದರು.

7.ಸಭೆಯಲ್ಲಿ ಪಾಲ್ಗೊಂಡಿರುವ ಭೂ ಮಾಲೀಕರು.