ರಾಮನಗರ: ಸ್ವಾಮೀಜಿಗಳ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು. ಹಾಗಾದರೆ ಕುಮಾರಸ್ವಾಮಿಗೆ ಸ್ವಾಮೀಜಿಗಳ ಆಶೀರ್ವಾದ ಬೇಡವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಶ್ನಿಸಿದರು.

ರಾಮನಗರ: ಸ್ವಾಮೀಜಿಗಳ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು. ಹಾಗಾದರೆ ಕುಮಾರಸ್ವಾಮಿಗೆ ಸ್ವಾಮೀಜಿಗಳ ಆಶೀರ್ವಾದ ಬೇಡವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಶ್ನಿಸಿದರು.

ನಾಯಕತ್ವ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ಧರ್ಮ ರಕ್ಷಣೆ ಮಾಡಬೇಕು, ರಾಜಕೀಯಕ್ಕೆ ಎಂಟ್ರಿ ಆಗಬಾರದು ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಶ್ರೀಗಳ ಆಶೀರ್ವಾದ ಇರಲಿಲ್ವಾ? ಕುಮಾರಸ್ವಾಮಿ ಏನು ಸ್ವಯಂ ಘೋಷಿತ ದೇವಮಾನವರಾ ಎಂದು ತಿರುಗೇಟು ನೀಡಿದರು.

ನಾನು ರಾಜಕೀಯಕ್ಕೆ ಹೊಸದಾಗಿ ಬಂದ ವೇಳೆ ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಚೆನ್ನಾರೆಡ್ಡಿ ಆಯೋಗದ ವಿರುದ್ಧ ಹೋರಾಟ ನಡೆಯಿತು. ಆ ಹೋರಾಟ ಮಾಡಿದ್ದೇ ದೇವೇಗೌಡರ ಸಿಎಂ ಮಾಡಲು. ಆಗ ದೇವೇಗೌಡರು ಮುಖ್ಯಮಂತ್ರಿಯಾದರು. ಈಗ ಅದೇ ಶ್ರೀಗಳ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಹೇಳಿದರು.

ಅಲ್ಲದೇ ನವೆಂಬರ್ ಕ್ರಾಂತಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯ ಯಾವುದೇ ಕ್ರಾಂತಿ ಇಲ್ಲ, ನಾವೆಲ್ಲ 2028ರ ಹೋರಾಟಕ್ಕೆ ಸಿದ್ಧವಾಗುತ್ತಿದ್ದೇವೆ. ಸಿಎಂ-ಡಿಸಿಎಂ ನಡುವೆ ಏನು ಒಪ್ಪಂದ ಅನ್ನೋದರ ಬಗ್ಗೆ ನಾವ್ಯಾಕೆ ಬಹಿರಂಗವಾಗಿ ಹೇಳಬೇಕು. ಸಮಯ ಬಂದಾಗ ಎಲ್ಲಾ ಕುತೂಹಲವನ್ನು ತಣಿಸುತ್ತೇವೆ ಎಂದರು.

ಬಾಕ್ಸ್‌............

ಎಸ್ ಡಿಪಿಐ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲು

ರಾಮನಗರ: ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಎಸ್‌ಡಿಪಿಐ ಮುಖಂಡನ ಮೇಲೆ ರಾಮನಗರ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನ.21ರಂದು ಎಸ್ ಡಿಪಿಐ ವತಿಯಿಂದ ನಡೆದಿದ್ದ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಎಸ್ ಡಿಪಿಐ ರಾಜ್ಯ ಸಂಚಾಲಕ ಮೌಲಾನಾ ನೂರುದ್ದೀನ್, ಪ್ರತಾಪ್ ಸಿಂಹ ಹಾಗೂ ಯತ್ನಾಳ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ವಿವಾದಾತ್ಮಕ ಭಾಷಣ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆರ್‌ಎಸ್‌ಎಸ್ ಹಾಗೂ ಹಿಂದೂ ಮುಖಂಡರ ಬಗ್ಗೆ ಅವಹೇಳನ ಮಾಡಿರುವ ಆರೋಪದಡಿ ಬಿಜೆಪಿ ಕಾರ್ಯಕರ್ತ ಸಿದ್ದರಾಜು ಎಂಬುವರು ಈ ಬಗ್ಗೆ ರಾಮನಗರ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಸ್ ಡಿಪಿಐ ಸಂಚಾಲಕ ಮೌಲಾನಾ ನೂರುದ್ದೀನ್, ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್, ತಾಲೂಕು ಅಧ್ಯಕ್ಷ ಸುಲ್ತಾನ್ ಅಲಿಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.