ಬಳ್ಳಾರಿಯ ಅದಿರು ಗಣಿಗಾರಿಕೆ ಯೋಜನೆಗೆ ಎಚ್‌ಡಿಕೆ ಸಹಿ

| Published : Jun 13 2024, 12:47 AM IST

ಸಾರಾಂಶ

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್‌.ಡಿ.ಕುಮಾರಸ್ವಾಮಿ, ಬುಧವಾರ ಕರ್ನಾಟಕಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದರು.

ಕನ್ನಡಪ್ರಭ ವಾರ್ತೆ ನವದೆಹಲಿ

ಮಂಗಳವಾರ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್‌.ಡಿ.ಕುಮಾರಸ್ವಾಮಿ, ಬುಧವಾರ ಕರ್ನಾಟಕಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದರು.

ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿನ ಉದ್ದೇಶಿತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ಯೋಜನೆಯ ಕಡಿತಕ್ಕೆ ಅವರು ಸಹಿ ಹಾಕಿದರು. ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್‌ (ಕೆಐಒಸಿಎಲ್) ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಅನುಮತಿ ನೀಡಿದೆ. 388 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸುವ ಯೋಜನೆ ಇದಾಗಿದೆ. 50 ವರ್ಷಗಳ ಅವಧಿಯ ಈ ಗಣಿಗಾರಿಕೆ ಗುತ್ತಿಗೆಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ 2023ರ ಜನವರಿ 2 ರಂದು ಒಪ್ಪಿಗೆ ನೀಡಿತ್ತು. ಗುತ್ತಿಗೆ ಅವಧಿಯಲ್ಲಿ ಈ ಪ್ರದೇಶದಲ್ಲಿ ಕನಿಷ್ಠ 30 ಮಿಲಿಯನ್ ಟನ್ ಅದಿರು ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ.

ಈ ಕಡತ ಕೇಂದ್ರ ಉಕ್ಕು ಇಲಾಖೆಯಲ್ಲಿ ಹಲವು ದಿನಗಳಿಂದ ಬಾಕಿ ಬಿದ್ದಿತ್ತು. ಉದ್ಯೋಗ ಭವನದ ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಹಾಗೂ ಇತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸಚಿವರು ಬುಧವಾರ ಈ ಕಡಿತಕ್ಕೆ ಸಹಿ ಹಾಕಿದರು. ಈ ಕಡತಕ್ಕೆ ಕೇಂದ್ರ ಹಣಕಾಸು ಇಲಾಖೆಯ ಅನುಮೋದನೆ ದೊರೆಯಬೇಕಿದೆ.