ಎಚ್‌ಡಿಕೆಗೆ ದಿಢೀರ್‌ ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ

| Published : Feb 29 2024, 02:04 AM IST

ಸಾರಾಂಶ

ಗಂಟಲಿನ ಸೋಂಕು ಸಮಸ್ಯೆಯಿಂದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಂಟಲಿನ ಸೋಂಕು ಸಮಸ್ಯೆಯಿಂದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ. ಬುಧವಾರ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಲು ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಗಂಟಲು ಸಮಸ್ಯೆ ತೀವ್ರವಾದ ಕಾರಣ ಕಲಾಪಕ್ಕೆ ತೆರಳದೆ ನೇರವಾಗಿ ಜಯನಗರದಲ್ಲಿನ ಅಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯಲು ಹೇಳಿ ಮನೆಗೆ ಕಳುಹಿಸಿದರು. ಮನೆಯಲ್ಲಿಯೇ ಕೆಲವು ದಿನಗಳ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದರಿಂದ ಕುಮಾರಸ್ವಾಮಿ ಅವರು ಮನೆಯಲ್ಲಿಯೇ ವಿಶ್ರಾಂತಿಗೆ ಮೊರೆಹೋಗಿದ್ದಾರೆ. ಕೆಲವು ದಿನಗಳಿಂದ ಕುಮಾರಸ್ವಾಮಿ ಗಂಟಲಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ವೈದ್ಯರು ಹೆಚ್ಚಾಗಿ ಮಾತನಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಎಲ್ಲಿಯೂ ಮಾತನಾಡದೆ ಆರೋಗ್ಯದ ಕಡೆ ಗಮನವಹಿಸಿದ್ದಾರೆ.