ಸಾರಾಂಶ
ಜಿಲ್ಲೆಯಲ್ಲಿ ಅನುಭವವುಳ್ಳ ಶಂಕರಗೌಡರು, ಜಿ.ಮಾದೇಗೌಡ್ರು, ಎಸ್.ಎಂ ಕೃಷ್ಣ ಸೇರಿ ಅನೇಕ ಮುಖಂಡರು ರಾಜಕಾರಣ ಮಾಡಿದ ಜಿಲ್ಲೆ ನಮ್ಮದು. ಆದರೆ, ಪ್ರಸ್ತುತ ಜಿಲ್ಲಾ ರಾಜಕಾರಣ ಹಾಳಾಗುತ್ತಿದೆ. ಪರೋಕ್ಷವಾಗಿ ದೊಡ್ಡ ದೊಡ್ಡ ರಾಜಕಾರಣಿಗಳ ಕೈವಾಡವಿರುವುದು ದುರಂತ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಳಿ ತಪ್ಪುತ್ತಿರುವ ಜಿಲ್ಲೆಯ ರಾಜಕಾರಣವನ್ನು ಸರಿಪಡಿಸಲು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಮ್ಮತದಿಂದ ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕಿಸಲಾಗಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಹೆಚ್ಡಿಕೆ ಪರ ಮತಯಾಚಿಸಿ ಮಾತನಾಡಿದರು.
ಮಂಡ್ಯ ಜಿಲ್ಲಾ ರಾಜಕಾರಣ ತನ್ನದೇ ಆದ ಗಾಂಭೀರ್ಯ ಹೊಂದಿತ್ತು, ಆದರೆ, ಕಾಂಗ್ರೆಸ್‌ನ ಕೆಲ ಧೋರಣೆಗಳಿಂದಾಗಿ ಜಿಲ್ಲಾ ರಾಜಕಾರಣದ ಮರ್ಯಾದೆ ಹಾಳಾಗುತ್ತಿದೆ. ರಾಜಕೀಯವಾಗಿ ರಾಜ್ಯದಲ್ಲೇ ಮಂಡ್ಯ ಜಿಲ್ಲೆಗೆ ಒಳ್ಳೆಯ ಸ್ಥಾನಮಾನ ಗಳಿಸಿತ್ತು, ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಇಡೀ ರಾಜ್ಯವೇ ಎದುರು ನೋಡುವಂತಿತ್ತು ಎಂದರು.ಜಿಲ್ಲೆಯಲ್ಲಿ ಅನುಭವವುಳ್ಳ ಶಂಕರಗೌಡರು, ಜಿ.ಮಾದೇಗೌಡ್ರು, ಎಸ್.ಎಂ ಕೃಷ್ಣ ಸೇರಿ ಅನೇಕ ಮುಖಂಡರು ರಾಜಕಾರಣ ಮಾಡಿದ ಜಿಲ್ಲೆ ನಮ್ಮದು. ಆದರೆ, ಪ್ರಸ್ತುತ ಜಿಲ್ಲಾ ರಾಜಕಾರಣ ಹಾಳಾಗುತ್ತಿದೆ. ಪರೋಕ್ಷವಾಗಿ ದೊಡ್ಡ ದೊಡ್ಡ ರಾಜಕಾರಣಿಗಳ ಕೈವಾಡವಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕಾರಣದ ಯಾವುದೇ ಗಂಧ, ಗಾಳಿ ತಿಳಿಯದ ಕೇವಲ ಹಣ ಮಾಡಿದವರನ್ನು ಕಾಂಗ್ರೆಸ್ ಪಕ್ಷ ಹುಡುಕಿ ರಾಜಕಾರಣಕ್ಕೆ ಕರೆತರುತ್ತಿದ್ದಾರೆ. 6 ತಿಂಗಳು ಮೊದಲೇ ಯಾರು ಹೆಚ್ಚಿಗೆ ಹಣ ಮಾಡಿದ್ದಾರೆ ಎಂದು ಹುಡುಕಿ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ಇಂತಹ ಅನಿವಾರ್‍ಯ ಪರಿಸ್ಥಿತಿಯಲ್ಲಿ ಜಿಲ್ಲೆಯ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಒತ್ತಾಯ ಪೂರ್ವಕವಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದ್ದಾರೆ. ಜಿಲ್ಲೆಯ ಗೌರವ ಹಾಗೂ ಹಳಿ ತಪ್ಪುತ್ತಿರುವ ಜಿಲ್ಲಾ ರಾಜಕಾರಣ ಸರಿಪಡಿಸುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.ತಾಲೂಕಿನಲ್ಲಿ ನಗುವನಹಳ್ಳಿ, ಬ್ರಹ್ಮಪುರ, ಮೊಮ್ಮೂರು ಅಗ್ರಹಾರ, ಬೆಳವಾಡಿ, ನಗುವನಹಳ್ಳಿ ಕಾಲೋನಿ, ಚಂದಗಾಲು, ನಾಗಯ್ಯನಹುಂಡಿ, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಹೆಬ್ಬಾಡಿ, ಹಂಪಾಪುರ, ಹುರಳಿಕ್ಯಾತನಹಳ್ಳಿ, ಚಿಕ್ಕಂಕನಹಳ್ಳಿ, ಸುಗ್ಗಹಳ್ಳಿ, ಕೊಕ್ಕರೆಹುಂಡಿ, ತರೀಪುರ, ಮಹದೇವಪುರ ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ದಶರಥ, ಬಾಬುರಾಯನಕೊಪ್ಪಲು ತಿಲಕ್, ಬಿಜೆಪಿ ಮುಖಂಡ ಟಿ.ಶ್ರೀಧರ್, ಮುಖಂಡರಾದ ನಗುವನಹಳ್ಳಿ ಶಿವಸ್ವಾಮಿ, ನೆಲಮನೆ ಗುರುಪ್ರಸಾದ್, ಅನಿಲ್, ಕಿರಣ್, ಸಂಜಯ್, ಕೊಕ್ಕರೆಹುಂಡಿ ರವಿ, ಶಿವಣ್ಣ, ಲತಾ, ಬೆಳವಾಡಿ ಜವರಪ್ಪ, ಏಜಾಜ್‌ಪಾಷ, ಹೆಬ್ಬಾಡಿ ಮಂಜು ಸೇರಿ ಇತರರು ಇದ್ದರು.