ಎಚ್‌ಡಿಕೆ ವರ್ಸಸ್‌ ಸಿದ್ದು ಅಭಿಮನ್ಯು ಕಾಳಗ!

| Published : Oct 28 2024, 12:56 AM IST

ಸಾರಾಂಶ

ಚನ್ನಪಟ್ಟಣದ ಜನ ನನ್ನ ಮಗನನ್ನು ಅಭಿಮನ್ಯು ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ/ಬೆಂಗಳೂರು

ಚನ್ನಪಟ್ಟಣದ ಜನರು ನನ್ನ ಮಗನನ್ನು ಅಭಿಮನ್ಯು ಮಾಡುವುದಿಲ್ಲ. ಅರ್ಜುನನ ಪಾತ್ರ ಕೊಡ್ತಾರೆ. ಯಾರೇ, ಏನೇ ಕುತಂತ್ರ ಮಾಡಿದರೂ ಜನರು ನಿಖಿಲ್‌ನನ್ನು ಗೆಲ್ಲಿಸುತ್ತಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಅವನತಿ ಶುರುವಾಗಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಭಾನುವಾರ ಹಾಸನಾಂಬ ದೇವಿ ದರ್ಶನ ಪಡೆದು, ಬಳಿಕ ಶಾಸಕ ಎಚ್‌.ಪಿ.ಸ್ವರೂಪ್ ಅವರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ಕೆಲ ಕಾರಣಗಳಿಂದ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದ. ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿದ್ದೇನೆ ಎಂದರು. ನನ್ನ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನೇ ಕುತಂತ್ರ ಮಾಡಿದರೂ ಸೋಲಿಸಲು ಸಾಧ್ಯವಿಲ್ಲ. ಈ ಬಾರಿ ಚನ್ನಪಟ್ಟಣದಿಂದ ಕಾಂಗ್ರೆಸ್ ಅವನತಿ ಆರಂಭವಾಗುತ್ತದೆ. ಹಾಸನಾಂಬೆ ದರ್ಶನ ಮಾಡಿ ಹೇಳ್ತಾ ಇದೀನಿ, ಇದನ್ನು ಬರೆದಿಟ್ಟುಕೊಳ್ಳಿ ಎಂದು ಸವಾಲು ಹಾಕಿದರು.ಪ್ರಸಾದ ನೀಡಿದ ಸಿದ್ದೇಶ್ವರ:ಹಾಸನಾಂಬೆ ದರ್ಶನದ ಬಳಿಕ ಎಚ್ಡಿಕೆ ದಂಪತಿ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ವೇಳೆ, ಸ್ವಾಮಿಯ ಬಲಭಾಗದಿಂದ ಹೂವು ಬಿತ್ತು. ಇದನ್ನು ಗಮನಿಸಿದ ಅನಿತಾ ಕುಮಾರಸ್ವಾಮಿ, ಪತಿಗೆ ಕೈ ಸನ್ನೆ ಮಾಡಿ ತಿಳಿಸಿದರು. ಇದೊಂದು ಶುಭ ಸೂಚನೆ, ಸಿದ್ದೇಶ್ವರ ಪ್ರಸಾದ ನೀಡಿದ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಆಗ ಸೋತು ಅಭಿಮನ್ಯು ಆಗಿದ್ದವರು ಈಗ ಏಕಾಏಕಿ ಅರ್ಜುನ ಆಗ್ತಾರಾ: ಸಿದ್ದು

ಹಿಂದೆ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ನಿಖಿಲ್‌ ಕುಮಾರಸ್ವಾಮಿ ಅಭಿಮನ್ಯು ಆಗಿರಲಿಲ್ಲವೇ? ಈಗ ಉಪಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಅರ್ಜುನ ಆಗ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ಮಂಡ್ಯದಲ್ಲಿ, ನಂತರ ರಾಮನಗರದಲ್ಲಿ ನಿಖಿಲ್‌ ಸೋತಿದ್ದರು. ಆಗ ಅಭಿಮನ್ಯು ಆಗಿರಲಿಲ್ಲವೇ? ಈಗ ಇದ್ದಕ್ಕಿದ್ದಂತೆ ಅರ್ಜುನ ಆಗ್ತಾರಾ ಎಂದರು.ಸಚಿವ, ಶಾಸಕರೊಂದಿಗಿನ ಸಭೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಸಿದ್ಧತೆಗಳ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲು ಬೆಳಗ್ಗೆ ಸಚಿವರು, ಸಂಸದರು, ಶಾಸಕರೊಂದಿಗೆ ಸಭೆ ನಡೆಸಲಾಯಿತು. ಎಲ್ಲ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸುವಂತೆ ತಿಳಿಸಲಾಯಿತು ಎಂದು ತಿಳಿಸಿದರು.3ನೇ ಬಾರಿಗೆ ನಿಖಿಲ್‌ ಕುಮಾರಸ್ವಾಮಿ ಚಕ್ರವ್ಯೂಹ ಭೇದಿಸ್ತಾರೆ: ಅಶೋಕ್‌

ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ನಿಖಿಲ್, ಈ ಹಿಂದೆ ಎರಡು ಬಾರಿ ಸೋತಿದ್ದಾರೆ. ಆದರೆ, ಮೂರನೇ ಬಾರಿ ಚಕ್ರವ್ಯೂಹವನ್ನು ಭೇದಿಸುತ್ತಾರೆ. ಅರ್ಜುನನ ರೀತಿ ಚಕ್ರವ್ಯೂಹ ಭೇದಿಸುವ ವಿಶ್ವಾಸವಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಿಖಿಲ್‌ಗೆ ಅಭಿಮನ್ಯು ಪಾತ್ರ ಬಿಟ್ಟು ಅರ್ಜುನನ ಪಾತ್ರ ಕೊಟ್ಟಿದ್ದೇವೆ. ಅರ್ಜುನನ ರೀತಿ ಚಕ್ರವ್ಯೂಹ ಭೇದಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಬಿಜೆಪಿಯ ಎಲ್ಲಾ ನಾಯಕರು ಪ್ರಚಾರಕ್ಕೆ ಹೋಗುತ್ತಾರೆ. ಯಡಿಯೂರಪ್ಪ ಅವರು ಮೂರು ದಿನ ಟೈಂ ಕೊಟ್ಟಿದ್ದಾರೆ. ನಾನು, ಅಶ್ವಥ್ ನಾರಾಯಣ್, ಸದಾನಂದಗೌಡರು, ಲಿಂಗಾಯಿತ, ದಲಿತ, ಹಿಂದುಳಿದ ನಾಯಕರು ಎಲ್ಲರೂ ಹೋಗುತ್ತಿದ್ದೇವೆ ಎಂದರು.