ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಚನ್ನಪಟ್ಟಣ ಬೇಡ ಎಂದು ಮಂಡ್ಯಕ್ಕೆ ಹೋದ ಎಚ್ಡಿಕೆ : ಯೋಗೇಶ್ವರ್

| Published : Nov 02 2024, 01:44 AM IST / Updated: Nov 02 2024, 07:37 AM IST

ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಚನ್ನಪಟ್ಟಣ ಬೇಡ ಎಂದು ಮಂಡ್ಯಕ್ಕೆ ಹೋದ ಎಚ್ಡಿಕೆ : ಯೋಗೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

 ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಇಲ್ಲಿಂದ ಸಿಎಂ ಆದ ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು. ಏನು ಮಾಡಿದ್ದೇನೆ ಎಂದು ತಮ್ಮ ಮಗನನ್ನು ತಂದು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ಚನ್ನಪಟ್ಟಣ: ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಇಲ್ಲಿಂದ ಸಿಎಂ ಆದ ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು. ಏನು ಮಾಡಿದ್ದೇನೆ ಎಂದು ತಮ್ಮ ಮಗನನ್ನು ತಂದು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ತಾಲೂಕು ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಕುಮಾರಸ್ವಾಮಿ ಅವರು ಈ ತಾಲೂಕು ಬೇಡ ಎಂದು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರವಿದೆ ಇಲ್ಲಿ ಇದ್ದರೆ ನನಗೇನು ಪ್ರಯೋಜನ ಇಲ್ಲ ಎಂದು ರಾಜೀನಾಮೆ ನೀಡಿ ಮಂಡ್ಯಕ್ಕೆ ಹೋಗಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ ಎಂದರು.

ಸಿಎಂ ಆದರೂ ಅವರು ತಾಲೂಕಿಗೆ ಏನು ಮಾಡಲಿಲ್ಲ. ಜೆಡಿಎಸ್ ಮುಖಂಡರು ಈ ಬಾರಿ ಅವರ ಪರವಾಗಿ ಮತ ಕೇಳಬೇಡಿ. ಮತ ಕೇಳಿದರೆ ಅದು ನಿಮಗೆ ನೀವು ಮಾಡಿಕೊಳ್ಳುವ ದ್ರೋಹ ಎಂದರು.

ನಾನು ಸೋತದಕ್ಕೆ ಕೆರೆ ಒಣಗಿದೆ: ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಕೆರೆಗಳನ್ನು ತುಂಬಿಸಿದ್ದೆ. ಆಗ ಇಲ್ಲಿಗೆ ಬಂದಿದ್ದ ಅಂಬರೀಶ್ ನನ್ನ ಥರ ಸಿನಿಮಾ ಮಾಡಿಕೊಂಡು ಇದ್ದವನು ರಾಜಕೀಯಕ್ಕೆ ಬಂದು ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದಿಯಾ. ಅದನ್ನು ಮುಂದುವರಿಸು ಎಂದರು. ಆದರೆ, ಮುಂದುವರಿಸಲು ಆಗದಂತೆ ಜನ ನನ್ನನ್ನು ಸೋಲಿಸಿಬಿಟ್ಟರು. ಹಾಗಾಗಿ ಇವತ್ತು ಈ ಊರಿನ ಕೆರೆ ಒಣಗಿದೆ. ನಾನು ಶಾಸಕನಾಗಿ ಇದ್ದಿದ್ದರೆ ಕೆರೆ ತುಂಬಿತುಳುಕುತ್ತಿತ್ತು ಎಂದರು.

ದೇವರು ನೀಡಿದ ಅವಕಾಶ:

ನನ್ನ ಅದೃಷ್ಟ ಮತ್ತೊಂದು ಉಪಚುನಾವಣೆ ಬಂದಿದೆ. ನನಗೆ ಮತ್ತೆ ಜನ ಆಶಿರ್ವಾದ ಮಾಡಲು ದೇವರು ಒಂದು ಅವಕಾಶ ನೀಡಿದ್ದಾನೆ. ಇನ್ನು ಮೂರುವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ. ನೂರಾರು ಕೋಟಿ ಹಣ ತಂದು ಅಭಿವೃದ್ಧಿ ಮಾಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಅಭಿವೃದ್ಧಿ ಪಟ್ಟಿ ಮಾಡಿ:

ಈ ಮಣ್ಣಿಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಶಕ್ತಿ ಇದೆ. ಕುಮಾರಸ್ವಾಮಿ ಏನೋ ಮಾಡಿಬಿಡ್ತಾರೆ ಅಂತ ಎರಡು ಬಾರಿ ಗೆಲ್ಲಿಸಿದರು. ಕುಮಾರಸ್ವಾಮಿ ಏನು ಅಭಿವೃದ್ಧಿ ಮಾಡಿದ್ದಾರೆ, ಯೋಗೇಶ್ವರ್ ಏನು ಅಭಿವೃದ್ಧಿ ಮಾಡಿದ್ದಾರೆ ಪಟ್ಟಿ ಮಾಡಿ ಎಂದು ಜೆಡಿಎಸ್ ಮುಖಂಡರಿಗೆ ಸವಾಲು ಹಾಕಿದರು.

ಕುಮಾರಸ್ವಾಮಿ ಬಂದು ಸುಳ್ಳು ಹೇಳೋದು, ಕಣ್ಣೀರು ಹಾಕೋದು ಅಷ್ಟೇ ಕೆಲಸ. ಈಗಲಾದರೂ ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಆತ್ಮಸಾಕ್ಷಿ ಇಟ್ಟುಕೊಂಡು ಮತನೀಡಿ. ನೀರಾವರಿ ಅಭಿವೃದ್ಧಿ ಮಾಡಿದ್ದು ಯಾರು, ಈಗ ಬಂದು ನಮ್ಮಪ್ಪ ಮಾಡಿದ್ದು, ಅಂತ ಹೇಳ್ತಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಒಂದು ಬಸ್ ಸ್ಟ್ಯಾಂಡ್ ಮಾಡಲಿಲ್ಲ. ನಿಖಿಲ್ ಕಣ್ಣೀರು ಹಾಕಿದ ಅಂತ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಜನರ ಕಣ್ಣೀರು ನೋಡೊರು ಯಾರಪ್ಪ.? ಎಂದು ಪ್ರಶ್ನಿಸಿದರು.

ಇದೇ ವೇಳೆ ಅವರು ಅಕ್ಕೂರು ಜಿಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳ ಪ್ರಚಾರದಲ್ಲಿ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ರವಿ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಮುಖಂಡ ಎ.ಸಿ.ವೀರೇಗೌಡ ಸೇರಿದಂತೆ ಹಲವರಿದ್ದರು.