ಅನುದಾನ ತನ್ನಿ ಅಂದ್ರೆ ಯೋಜನೆ ಬಗ್ಗೆ ಮಾಹಿತಿ ಕೇಳ್ತಾರೆ

| Published : Dec 18 2024, 12:47 AM IST

ಅನುದಾನ ತನ್ನಿ ಅಂದ್ರೆ ಯೋಜನೆ ಬಗ್ಗೆ ಮಾಹಿತಿ ಕೇಳ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಶಾಸಕ ವೀರೇಂದ್ರ ಪಪ್ಪಿ ಬೆಳಗಾವಿ ಅಧಿವೇಶನದಲ್ಲಿ ಕೇಳಿರುವ ಪ್ರಶ್ನೆಗಳು ಕೋಟೆನಾಡು ಚಿತ್ರದುರ್ಗದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿದ್ದು, ಇಂತಹ ಪ್ರಶ್ನೆಗಳ ಕೇಳೋಕೆ ಅಧಿವೇಶನವೇ ಆಗಬೇಕಾ ಎಂಬ ಉದ್ಗಾರಗಳು ಜನರ ಕಡೆಯಿಂದ ಕೇಳಿ ಬರುತ್ತಿವೆ. ಅನುದಾನ ತಂದು ಕಾಮಗಾರಿ ಮುಗಿಸಿ ಅಂದ್ರೆ, ಶಾಸಕರು ಯೋಜನೆ ಬಗ್ಗೆ ಈಗ ಮಾಹಿತಿ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆಕ್ರೋಶಗಳು ಮಾರ್ದನಿಸುತ್ತಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಶಾಸಕ ವೀರೇಂದ್ರ ಪಪ್ಪಿ ಬೆಳಗಾವಿ ಅಧಿವೇಶನದಲ್ಲಿ ಕೇಳಿರುವ ಪ್ರಶ್ನೆಗಳು ಕೋಟೆನಾಡು ಚಿತ್ರದುರ್ಗದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿದ್ದು, ಇಂತಹ ಪ್ರಶ್ನೆಗಳ ಕೇಳೋಕೆ ಅಧಿವೇಶನವೇ ಆಗಬೇಕಾ ಎಂಬ ಉದ್ಗಾರಗಳು ಜನರ ಕಡೆಯಿಂದ ಕೇಳಿ ಬರುತ್ತಿವೆ. ಅನುದಾನ ತಂದು ಕಾಮಗಾರಿ ಮುಗಿಸಿ ಅಂದ್ರೆ, ಶಾಸಕರು ಯೋಜನೆ ಬಗ್ಗೆ ಈಗ ಮಾಹಿತಿ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆಕ್ರೋಶಗಳು ಮಾರ್ದನಿಸುತ್ತಿವೆ. ಭದ್ರಾ ಮೇಲ್ದಂಡೆಗೆ ಸಂಬಂಧಿಸಿದಂತೆ ಶಾಸಕ ವೀರೇಂದ್ರ ಪಪ್ಪಿ ಕೇಳಿರುವ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಉತ್ತರ ನೀಡಬೇಕಿತ್ತು. ಸೋಮವಾರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಹರಿದಾಡಿದವು. ದುರ್ಗದ ದಾಹ ತೀರಿಸಲು ಪಪ್ಪಿ ಅಣ್ಣನ ಪ್ರಯತ್ನ, ರೈತ ನಾಯಕ ಕೆ.ಸಿ.ವೀರೇಂದ್ರ ಪಪ್ಪಿ ಇಂದು ಶಾಸನ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳಲಿದ್ದಾರೆ ಎಂಬಿತ್ಯಾದಿ ಟ್ಯಾಗ್ ಲೈನ್ ಒಳಗೊಂಡ ಪ್ರಶ್ನೆಗಳು ಸಾಮಾಜಿಕ ಜಾಲ ತಾಣದಲ್ಲಿ ವಿಜೃಂಭಿಸಿದವು. ಏನಿವು ಪ್ರಶ್ನೆಗಳು ?:

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭದ್ರಾ ಮೇಲ್ಮಂಡೆ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಕಾಮಗಾರಿಯು ಪೂರ್ಣಗೊಳ್ಳದಿರುವುದರಿಂದ ಈ ಭಾಗದ ರೈತರಿಗೆ ತುಂಬಾ ಅನಾನುಕೂಲವಾಗಿ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿರುವುದು ಸರ್ಕಾರದ ಗಮನದಲ್ಲಿದೆಯೇ, ಸದರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಯಾವಾಗ ಕಲ್ಪಿಸಲಾಗುತ್ತದೆ ಎಂಬ ಪ್ರಶ್ನೆಯ ಶಾಸಕ ವೀರೇಂದ್ರ ಪಪ್ಪಿ ಕೇಳಿದ್ದರು. ಅತ್ಯಂತ ಜಂಟಲ್ ಮನ್ ಆಗಿ ಸರ್ಕಾರ ಉತ್ತರ ನೀಡಿದೆ. ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಡಚಣೆಯಾಗಿರುವ ಪ್ರದೇಶಗಳಲ್ಲಿ ರೈತರ ಮನವೊಲಿಸಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಿರುವ ರು.5,300 ಕೋಟಿಗಳ ಧನ ಸಹಾಯ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂಬ ಉತ್ತರವ ಜಲ ಸಂಪನ್ಮೂಲ ಸಚಿವರು ನೀಡಿದ್ದಾರೆ. ಕೇಂದ್ರ ಸರ್ಕಾರ 5300 ಕೋಟಿ ರು. ಅನುದಾನ ನೀಡದ ಕಾರಣ ಹಾಗೂ ರಾಜ್ಯ ಸರ್ಕಾರ ಕೇಂದ್ರ ನೀಡಲಿ ಎಂಬ ನೆಪ ಮುಂದಿಟ್ಟುಕೊಂಡು ಭದ್ರಾ ಮೇಲ್ದಂಡೆಯ ಉಪೇಕ್ಷಿಸಿದೆ ಎಂಬ ಸಂಗತಿ ಇಡೀ ಜಿಲ್ಲೆಯ ಜನರಿಗೆ ಗೊತ್ತಿದೆ. ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯು ಶಾಸಕ ವೀರೇಂದ್ರ ಪಪ್ಪಿ ಮನೆ ಮುಂಭಾಗ ತಮಟೆ ಚಳವಳಿ ನಡೆಸಿ ಎದ್ದೇಳು ಜನ ಸೇವಕ, ಅನುದಾನ ತಂದು ಕಾಮಗಾರಿ ಮುಗಿಸು ಎಂದು ಎಚ್ಚರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದರು. ಇದು ರಾಜ್ಯದ ಎಲ್ಲ ಕಾಂಗ್ರೆಸ್ ಶಾಸಕರಿಗೆ ಗೊತ್ತಿದೆ. ಭದ್ರಾ ಮೇಲ್ದಂಡೆ ಅನುದಾನದ ಕೊರತೆ ಎದುರಿಸುತ್ತಿರುವ ಸಂಗತಿ ಶಾಸಕ ವೀರೇಂದ್ರ ಪಪ್ಪಿಗೆ ಗೊತ್ತಿಲ್ಲವೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಕಾಮಗಾರಿ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಶಾಸಕ ಪಪ್ಪಿ ಪ್ರಶ್ನಿಸಿದ ಪರಿ ಕೂಡಾ ಟೀಕೆಗೆ ಒಳಗಾಗಿದೆ.ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಕಚೇರಿ ಇದೆ. ಶಾಸಕರಿಗೆ ಏನಾದರೂ ಮಾಹಿತಿ ಬೇಕಿದ್ದಲ್ಲಿ ಒಂದೇ ಒಂದು ಕಾಲ್ ಮಾಡಿದ್ರೆ ಸಾಕು, ಎಲ್ಲ ಮಾಹಿತಿಯನ್ನು ಉನ್ನತ ಅಧಿಕಾರಿಗಳು ಒದಗಿಸುತ್ತಾರೆ. ಕೆಡಿಪಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಪ್ರಗತಿ ಬಗ್ಗೆ ಚರ್ಚೆಯಾಗಿದೆ. ಭದ್ರಾ ಮೇಲ್ಡಂಡೆಗೆ ಅನುದಾನ ಕೊಡಿ ಎಂದು ಕೇಳಬೇಕಾದ ಶಾಸಕರು ಯೋಜನೆ ಬಗ್ಗೆ ಮಾಹಿತಿ ಕೊಡಿ ಎಂದು ಶಾಸನ ಸಭೆಯಲ್ಲಿ ಗೋಗರೆಯುವುದು ಚಿತ್ರದುರ್ಗದ ದುರಂತ

---- ಬೇಡರೆಡ್ಡಿ ಬಸವರೆಡ್ಡಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡ.