ಸಾರಾಂಶ
ಹಾರೋಹಳ್ಳಿ: ಕೆಲ ಪ್ರಭಾವಿ ವ್ಯಕ್ತಿಗಳು ಅಧಿಕಾರಿಗಳ ಜತೆಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಸಿ.ರಾಜಪ್ಪ(ಚಲುವರಾಜು )ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಸಂದ್ರ ಗ್ರಾಮದಲ್ಲಿ 1991ರಲ್ಲಿ ನಮ್ಮ ತಾಯಿ ಜಮೀನು ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೂ ಆ ಜಾಗದಲ್ಲಿ ನಾವೇ ಅನುಭವದಲ್ಲಿದ್ದೇವೆ. ಹೀಗಿದ್ದರೂ ಕೆಲವರು ಅದೇ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.ಕೈಗಾರಿಕಾ ಪ್ರದೇಶ ಆದಾಗಿನಿಂದಲೂ ಭೂಮಿಗೆ ಬೆಲೆ ಹೆಚ್ಚಾಗಿದ್ದರಿಂದ ಹೆದರಿಸಿ ಬೆದರಿಸುವ ದಂಧೆ ಇಲ್ಲಿಗೂ ಕಾಲಿಟ್ಟಿದೆ. ನಮ್ಮ ಜಮೀನಿಗೆ ಇತ್ತೀಚೆಗೆ ವ್ಯಕ್ತಿಯೊಬ್ಬರು ನಮ್ಮ ಜಮೀನು ಎಂದು ಸರ್ವೆಗೆ ಅರ್ಜಿ ಹಾಕಿದ್ದಾರೆ. ಆ ಸಮಯದಲ್ಲಿ ದೂರು ನೀಡಿದ್ದೇವೆ. ಹೀಗಿದ್ದರು ಸಹ ಸರ್ವೆಗೆ ಬಂದಿದ್ದಾರೆ. ಪ್ರಭಾವಿಗಳ ಬೆಂಬಲವಿದ್ದು 500 ರೌಡಿಗಳೊಂದಿಗೆ ಬಂದು ಬೆದರಿಸುತ್ತಿದ್ದಾರೆ ಎಂದರು.
ಅಧಿಕಾರಿಗಳು ನಿಯಮ ಮೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದಕ್ಕೆ ತಾಲೂಕು ಆಡಳಿತ ಹೊಣೆ. ಭೂ ಪರಿವರ್ತನೆ ಜಾಗವನ್ನು ಈ ರೀತಿ ಮಾಡಿರುವುದು ಸರಿಯಲ್ಲ. ಸರ್ವೆ ಮಾಡಲು ಅಕ್ಕ ಪಕ್ಕದ ಜಮೀನು ಮಾಲೀಕರಿಗೆ ಯಾವುದೇ ರೀತಿಯ ನೋಟೀಸ್ ನೀಡಿಲ್ಲ. ತಹಸೀಲ್ದಾರ್ ಅವರಿಗೆ ಜಂಟಿ ಸರ್ವೇಗೆ ಅರ್ಜಿ ನೀಡುತ್ತಾರೆ. ಜೊತೆಗೆ ಒಂದೇ ದಿನಕ್ಕೆ ಪೊಲೀಸ್ ಠಾಣೆಗೆ ಬಂದೋಬಸ್ತ್ ನೀಡುವಂತೆ ಅರ್ಜಿ ನೀಡುತ್ತಾರೆ ಎಂದು ಆರೋಪಿಸಿದರು. ಕನಕಪುರದ ದೌರ್ಜನ್ಯ ದಬ್ಬಾಳಿಕೆ ಸಂಸ್ಕೃತಿ ಹಾರೋಹಳ್ಳಿಗೆ ಕಾಲಿಟ್ಟಿದೆ. ನಕಲಿ ದಾಖಲೆ ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. 500 ಮಂದಿ ಸೇರಿದರೂ ಸಹ ಪೊಲೀಸರು ಅತ್ತ ಹೆಜ್ಜೆಯು ಹಾಕಿಲ್ಲ. ಕನಕಪುರದ ಪ್ರಭಾವಿಗಳ ಶ್ರೀ ರಕ್ಷೆ ಇದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜಪ್ಪ ಒತ್ತಾಯಿಸಿದರು.ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ ಗೋವಿಂದಯ್ಯ ಮಾತನಾಡಿ, ಜನ ಸಾಮಾನ್ಯರು ಸರ್ವೆಗೆ ಅರ್ಜಿ ನೀಡಿದರೆ 6 ತಿಂಗಳು 1 ವರ್ಷಗಟ್ಟಲೆ ಅಲೆಸುತ್ತಾರೆ. ಸರ್ವೆ ಅಧಿಕಾರಿ ತಮ್ಮ ಪ್ರಭಾವ ಬಳಸಿದ್ದಾರೆ. ನಂದೀಶ್ ಅವರು ಮೊದಲು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಜನ ಸಾಮಾನ್ಯರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ವೈಫಲ್ಯಕ್ಕೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರೇ ನೇರ ಹೊಣೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಕೆ. ಸುರೇಶ್, ಎಚ್.ಸಿ. ಶೇಖರ್, ಪುರುಷೋತ್ತಮ್, ಅನಿಲ್, ಕೋಟೆ ಕುಮಾರ್ ಇತರರಿದ್ದರು.2ಕೆಆರ್ ಎಂಎನ್ 1.ಜೆಪಿಜಿ
ಹಾರೋಹಳ್ಳಿಯಲ್ಲಿ ಸಿ. ರಾಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.