ಸಾರಾಂಶ
ಬೆಂಗಳೂರು : ಸಚಿವ ಸಂಪುಟದಿಂದ ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಒಂದು ರೀತಿಯಲ್ಲಿ ‘ವಿವಾದಗಳ ಸರದಾರ’ ಎಂದೇ ಪಕ್ಷದ ವಲಯದಲ್ಲಿ ಕುಖ್ಯಾತರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಚರ್ಚೆಗೊಳಗಾದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಸ್ಥಾನದ ಬದಲಾವಣೆ, ಸಮುದಾಯಕ್ಕೊಂದು ಡಿಸಿಎಂ ಸ್ಥಾನ, ಸಚಿವ ಸಂಪುಟ ಪುನಾರಚನೆ ಸೇರಿದಂತೆ ಪ್ರತಿಯೊಂದು ಬೆಳವಣಿಗೆಯ ಹಿಂದೆಯೂ ರಾಜಣ್ಣ ಅವರ ವಿವಾದಾತ್ಮಕ ಹೇಳಿಕೆ ಇದ್ದೇ ಇರುತ್ತಿತ್ತು.ಅಷ್ಟೇ ಅಲ್ಲ, ಕೆ.ಎನ್.ರಾಜಣ್ಣ ಕೆಲ ಸಲ ಕಾಂಗ್ರೆಸ್ ಹೈಕಮಾಂಡ್‌ನ ಎಚ್ಚರಿಕೆಗೂ ಮಣಿಯದೆ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರೆಸಿದ್ದೂ ಉಂಟು. ಕೊನೆಗೆ ಇದೇ ಅವರಿಗೆ ಮುಳುವಾಗಿದೆ.
1. ಅಧಿಕಾರ ಹಂಚಿಕೆ ಬಗ್ಗೆ ಪದೇ ಪದೇ ಹೇಳಿಕೆ
ಮುಖ್ಯಮಂತ್ರಿ ಸ್ಥಾನದ ಬದಲಾವಣೆ, ಅಧಿಕಾರ ಹಂಚಿಕೆ ವಿಚಾರದ ಕುರಿತು ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಪದೇ ಪದೇ ಎಚ್ಚರಿಕೆ ನೀಡಿದರೂ, ರಾಜಣ್ಣ ಅವರು ಮಾತ್ರ ಆಗಾಗ ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಅವರು ಸಿದ್ದರಾಮಯ್ಯನವರೇ 5 ವರ್ಷ ಸಿಎಂ, 2028ಕ್ಕೂ ಅವರದ್ದೇ ನಾಯಕತ್ವ ಎಂಬುದು ಸೇರಿ ಪರೋಕ್ಷವಾಗಿ ಕೆಲವು ಸಲ ನೇರವಾಗಿಯೇ ಈ ವಿಚಾರಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹೇಳಿಕೆ ನೀಡಿದ್ದರು.
2. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಸರ್ಕಾರದಲ್ಲಿ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯನ್ನೂ ಪಡೆದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಜಣ್ಣ, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮ ಎಲ್ಲರಿಗೂ ಅನ್ವಯಿಸಬೇಕು. ನಾನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ನನಗೆ ಆ ಹುದ್ದೆ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.
3. ಸೆಪ್ಟೆಂಬರ್ ಕ್ರಾಂತಿ ಬಾಂಬ್
ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ ವಿಚಾರಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಹೈಕಮಾಂಡೇ ಫುಲ್‌ಸ್ಟಾಪ್ ಇಟ್ಟರೂ ರಾಜಣ್ಣ ಅವರು ಮಾತ್ರ ಹೇಳಿಕೆ ನಿಲ್ಲಿಸಿರಲಿಲ್ಲ. ಸೆಪ್ಟೆಂಬರ್‌ಗೆ ಕ್ರಾಂತಿ ಆಗಲಿ ಎಂದು ಇತ್ತೀಚೆಗಷ್ಟೆ ಪುನರುಚ್ಚರಿಸಿದ್ದರು. ಆದರೆ, ಇವರ ಕ್ರಾಂತಿ ಹೇಳಿಕೆಯನ್ನು ಸಿಎಂ ಆದಿಯಾಗಿ ಯಾರೂ ಒಪ್ಪಿಕೊಳ್ಳಲಿಲ್ಲ.
4. ಸಮುದಾಯಕ್ಕೊಂದರಂತೆ 5 ಡಿಸಿಎಂ ಸ್ಥಾನ
ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಒಬ್ಬರಿಗೇ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೂ ಆಗಾಗ ಆಕ್ಷೇಪಿಸುತ್ತಿದ್ದ ಅವರು, ಲಿಂಗಾಯತ, ಎಸ್ಸಿ-ಎಸ್ಟಿ ಸೇರಿದಂತೆ ಪ್ರಮುಖ ಸಮುದಾಯಕ್ಕೊಬ್ಬರಂತೆ ಐದು ಡಿಸಿಎಂ ಸ್ಥಾನ ಸೃಷ್ಟಿಸಬೇಕೆಂದು ಎಂದು ಆಗ್ರಹಿಸಿದ್ದರು. ಇದಕ್ಕೆ ಪಕ್ಷದಲ್ಲಿ ಒಪ್ಪಿಗೆ ಸಿಗದಿದ್ದಾಗ ಡಿಸಿಎಂ ಸ್ಥಾನ ಎಂದರೆ ತಲೆ ಮೇಲೆ ಕಿರೀಟ ಇರೋಲ್ಲ ಎಂಬ ಹೇಳಿಕೆ ನೀಡಿದ್ದರು.
5. ಸುರ್ಜೇವಾಲಾ ಸಭೆಗೂ ಆಕ್ಷೇಪ
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಇತ್ತೀಚೆಗೆ ಪಕ್ಷದ ಶಾಸಕರು ಮತ್ತು ಸಚಿವರ ಜತೆ ನಡೆಸಿದ ಸಭೆಗೆ ಗೈರು ಹಾಜರಾಗಿದ್ದಲ್ಲದೆ, ಸಭೆಗೆ ಅಧಿಕಾರಿಗಳನ್ನು ಆಹ್ವಾನಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪಕ್ಷದ ಮುಖಂಡರು ತಮ್ಮ ಸಭೆಗೆ ಸರ್ಕಾರದ ಅಧಿಕಾರಿಗಳನ್ನು ಆಹ್ವಾನಿಸುವುದು ಸಂವಿಧಾನ ಬಾಹಿರ ಎಂದು ನೇರವಾಗಿಯೇ ಸುರ್ಜೇವಾಲಾ ಕಾರ್ಯವೈಖರಿಯನ್ನು ವಿರೋಧಿಸಿದ್ದರು
6. 48 ರಾಜಕಾರಣಿಗಳಿಗೆ ಹನಿಟ್ರ್ಯಾಪ್
ರಾಜ್ಯದ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದಾಗಲೇ, ನನ್ನನ್ನೂ ಸೇರಿದಂತೆ 48 ಸಚಿವರು, ಮಾಜಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಈ ಬಗ್ಗೆ ತನ್ನ ಬಳಿ ಸಾಕ್ಷಿಯಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಕ್ಷಿ ಕೊಡುವುದಾಗಿ ಹೇಳಿ, ನಂತರ ಕನಿಷ್ಠ ದೂರನ್ನೂ ಕೊಡದೇ ಸುಮ್ಮನಾಗಿದ್ದರು.
7. ಒಕ್ಕಲಿಗರ ಸ್ವಾಮೀಜಿ ವಿರುದ್ಧ ಹೇಳಿಕೆ
ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನದ ಚಂದ್ರಶೇಖರ ನಾಥ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ರಾಜಣ್ಣ ಅವರು, ಸ್ವಾಮೀಜಿ ಅವರು ಖಾಕಿ ತೆಗೆದು ರಾಜಕೀಯಕ್ಕೆ ಬರಲಿ, ನಾನೇ ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಸವಾಲು ಹಾಕಿದ್ದರು. ಇದಲ್ಲದೆ ತುಮಕೂರಿನ ಡಿಡಿಸಿ ಬ್ಯಾಂಕ್ ಚುನಾವಣೆ ವೇಳೆ ಒಕ್ಕಲಿಗ ನಾಯಕರ ವಿರುದ್ಧ ‘ಅವರದ್ದೇ ಎಲ್ಲವೂ ನಡೆಯಬೇಕಾ’ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.