ಚಿಕನ್‌ ಪೀಸ್‌ಗಾಗಿ ಸ್ನೇಹಿತನನ್ನೇ ಹತ್ಯೆಗೈದ

| Published : Jul 15 2025, 01:00 AM IST

ಸಾರಾಂಶ

ಅಡುಗೆ ಮಾಡಲು ತಂದಿದ್ದ ಚಾಕುವನ್ನು ವಿನೋದ್‌ನ ಎದೆಯ ಭಾಗಕ್ಕೆ ವಿಠ್ಠಲ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ವಿಠ್ಠಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ನೇಹಿತನ ಮದುವೆ ಪಾರ್ಟಿಗೆ ಹೋಗಿದ್ದ ವೇಳೆ ಚಿಕನ್‌ ಪೀಸ್‌ಗಾಗಿ ನಡೆದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಯರಗಟ್ಟಿ ತಾಲೂಕಿನ ಸೊಪಡ್ಲ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ.

ಯರಗಟ್ಟಿ ಪಟ್ಟಣದ ವಿನೋದ ಚಂದ್ರಶೇಖರ ಮಲಶೆಟ್ಟಿ (25) ಕೊಲೆಯಾದ ಯುವಕ. ವಿಠ್ಠಲ ಹಾರುಗೊಪ್ಪ (28) ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೃತ ವಿನೋದನ ಸ್ನೇಹಿತ ಅಭಿಷೇಕ ಕೊಪ್ಪದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ತಮ್ಮ ಜಮೀನಿನಲ್ಲಿ ಸ್ನೇಹಿತರಿಗಾಗಿ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಗೆ ಸುಮಾರು 30 ಸ್ನೇಹಿತರು ಸೇರಿದ್ದರು. ವಿಠ್ಠಲ ಹಾರುಗೊಪ್ಪ ಊಟ ಬಡಿಸುತ್ತಿದ್ದ. ಈ ವೇಳೆ ಚಿಕನ್‌ ಪೀಸ್‌ಗಾಗಿ ವಿಠ್ಠಲನ ಜೊತೆಗೆ ವಿನೋದ ಜಗಳ ತೆಗೆದಿದ್ದಾನೆ. ಇದು ವಿಕೋಪಕ್ಕೆ ತಿರುಗಿದೆ. ಬಳಿಕ ಅಲ್ಲಿಯೇ ಅಡುಗೆ ಮಾಡಲು ತಂದಿದ್ದ ಚಾಕುವನ್ನು ವಿನೋದ್‌ನ ಎದೆಯ ಭಾಗಕ್ಕೆ ವಿಠ್ಠಲ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ವಿಠ್ಠಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆಯಿಂದಾಗಿ ತೋಟದ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ವಸ್ತುಗಳು ಬಿದ್ದಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಸರಗಿ, ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಪಾರ್ಟಿ ವೇಳೆ ಕೇವಲ ಚಿಕನ್‌ ಗಾಗಿ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇದಕ್ಕೆ ಬೇರೆ ಏನಾದರೂ ಕಾರಣ ಇದೆಯಾ ಎಂಬುದರ ಕುರಿತು ಮುರುಗೋಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹತ್ಯೆಗೈದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.