ಕತ್ತಲ್ಲಿದ್ದ ಚಿನ್ನದ ಸರದಾಸೆಗೆ ಸ್ನೇಹಿತೆಯನ್ನೇ ಕೊಂದ

| Published : Aug 26 2025, 01:02 AM IST

ಕತ್ತಲ್ಲಿದ್ದ ಚಿನ್ನದ ಸರದಾಸೆಗೆ ಸ್ನೇಹಿತೆಯನ್ನೇ ಕೊಂದ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಹೊಳೆಯುತ್ತಿದ್ದ ಚಿನ್ನದ ಮಾಂಗಲ್ಯ ಸರದ ಮೇಲೆ ಕಣ್ಣು ಬಿದ್ದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಟೋ ಚಾಲಕನೋರ್ವ ತನ್ನ ಆಟೋ ಸಾಲದ ಕಂತು ತೀರಿಸಲು ತನ್ನಿಬ್ಬರೂ ಸ್ನೇಹಿತೆಯರನ್ನು ಬಳಸಿಕೊಂಡು ಯೋಜನೆ ರೂಪಿಸಿ, ಹಳೆಯ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನ್ಯಾಮಗೊಂಡ್ಲು ಸೇತುವೆ ಬಳಿ ನಡೆದಿದೆ.

ಅರ್ಚನಾ (27) ಕೊಲೆಯಾದ ನತದೃಷ್ಟ ಸೇಹಿತೆ. ಸ್ನೇಹಿತರಾದ ರಾಕೇಶ್​, ನವೀನ್​, ನಿಹಾರಿಕಾ ಮತ್ತು ಅಂಜಲಿ ಕೊಲೆ ಮಾಡಿದ ಆರೋಪಿಗಳು.

ಆಗಸ್ಟ್ 16 ರಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ನ್ಯಾಮಗೊಂಡ್ಲು ಗ್ರಾಮದ ಸೇತುವೆಯೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಆಕೆ ಆಂಧ್ರದ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ನಿವಾಸಿಯಾದ ಅರ್ಚನಾ ಎಂಬುದು ಗೊತ್ತಾಗಿತ್ತು. ಹಿಂದೂಪುರ ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಅರ್ಚನಾ ಬಿಡುವಿನ ವೇಳೆಯಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಅರ್ಚನಾ ಆಗಸ್ಟ್​ 14 ರಂದು ಸ್ನೇಹಿತರ ಜೊತೆ ಚಿಕ್ಕಬಳ್ಳಾಪುರದ ಈಶಾ ಫೌಂಡೇಷನ್​ಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಬಂದವರು ವಾಪಸ್ ಹೋಗಿರಲಿಲ್ಲ.

ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್‍ಐ ಆಕೆಯ ಮೊಬೈಲ್ ನ ಸಿಡಿಆರ್ ಪರಿಶೀಲನೆ ಮಾಡಿದಾಗ ಕಾಣೆಯಾದ ದಿನದಂದು ಆರ್ಚನಾಳಿಗೆ ರಾಕೇಶ್ ಎಂಬಾತ ಹಲವು ಬಾರಿ ಕರೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಮೂಲತಃ ಗೌರಿಬಿದನೂರಿನ ವಿರೂಪಸಂದ್ರದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ರಾಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕ ರಾಕೇಶ್ ತನ್ನ ಆಟೋ ಸಾಲದ ಕಂತು ಮೂರು ತಿಂಗಳಿಂದ ಕಟ್ಟಿರಲಿಲ್ಲ ಹಾಗೂ ಬೈಕ್ ಮೇಲೆ 30,000 ರು. ಸಾಲ ಮಾಡಿ, ತೀರಿಸಲು ಸ್ನೇಹಿತೆಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ನಡೆದಿದ್ದೇನು:

ಕೊಲೆ ಆರೋಪಿ ಆಟೋ ಚಾಲಕ ಹಲವು ವರ್ಷಗಳ ಹಿಂದೆ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ ಆ ವೇಳೆ ಶುಭ ಸಮಾರಂಭದಲ್ಲಿ ಸ್ವಾಗತಕಾರರಾಗಿದ್ದ ಅರ್ಚನಾ ಪರಿಚಯವಾಗಿ, ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಹೊಳೆಯುತ್ತಿದ್ದ ಚಿನ್ನದ ಮಾಂಗಲ್ಯ ಸರದ ಮೇಲೆ ಕಣ್ಣು ಬಿದ್ದಿದೆ. ಈ ಮಾಂಗಲ್ಯ ಸರ ತನ್ನದಾಗಿಸಿ ಕೊಂಡರೆ ತನ್ನ ಸಾಲಗಳೆಲ್ಲಾ ತೀರುತ್ತದೆ ಎಂದು ಬೆಂಗಳೂರಿನಲ್ಲಿ ಪರಿಚಯವಾಗಿದ್ದ ತನ್ನ ಮತ್ತೊಬ್ಬ ಸ್ನೇಹಿತೆ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡು ಅರ್ಚನಾಳನ್ನು ಕೊಲೆ ಮಾಡುವ ಸಂಚು ರೂಪಿಸಿದ್ದನು.

ನಿಹಾರಿಕಾ ತನ್ನ ಬದಲು ತನ್ನ ಮತ್ತೊಬ್ಬ ಸ್ನೇಹಿತೆ ಅಂಜಲಿಯನ್ನು ಕಳಿಸಿಕೊಟ್ಟಿದ್ದಾಳೆ.

ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ಅಂಜಲಿ ಸ್ನೇಹಿತ ನವೀನ್ ಮೂವರು ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನು ಊಟಕ್ಕೆಂದು ಕರೆದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರು ಹತ್ತಿಸಿಕೊಂಡಿದ್ದಾರೆ. ಹಿಂದೂಪುರದಿಂದ ಗೌರಿಬಿದನೂರು, ಮಂಚೇನಹಳ್ಳಿ ಮಾರ್ಗವಾಗಿ ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ ಕತ್ತಲ್ಲಿದ್ದ ಚಿನ್ನದ ಸರ ತೆಗೆದುಕೊಂಡು ಮೃತದೇಹವನ್ನು ನ್ಯಾಮಗೊಂಡ್ಲು ಗ್ರಾಮದ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದಾರೆ.

ಅರ್ಚನಾಳನ್ನು ಕೊಲೆ ಮಾಡಿ ಕದ್ದಿದ್ದ ಮಾಂಗಲ್ಯ ಸರ ಹಾಗೂ ಬಂಗಾರದ ಕಿವಿಯ ಒಲೆಯನ್ನು ಫೈನಾನ್ಸ್‌ ಒಂದರಲ್ಲಿ 2.19 ಲಕ್ಷ ರು.ಗೆ ಅಡಮಾನ ಇಟ್ಟು ಬಂದ ಹಣದಿಂದ ಆಟೋ ಸಾಲದ ಕಂತು ಹಾಗೂ ಕೈ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿಕೊಂಡಿದ್ದರು.

ಈಗ ರಾಕೇಶ್ ಹಾಗೂ ಅಂಜಲಿಯನ್ನು ಬಂಧಿಸಿರುವ ಪೊಲೀಸರು, ಉಳಿದ ಇಬ್ಬರು ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾಗೆ ಹುಡುಕಾಟ ನಡೆಸಿದ್ದಾರೆ.