ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ನೀಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ಉಚ್ಚಾಟಿಸಬೇಕು ಎಂದು ಹಿರಿಯ ದಸಂಸ ಮುಖಂಡ ಎಚ್. ಕೆ. ಸಂದೇಶ್ ಹೇಳಿದರು.ಪಟ್ಟಣದ ದೇವರಾಜ ಅರಸು ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶುಕ್ರವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ದಿವಂಗತ ದಲಿತ ಚಳವಳಿ ಹೋರಾಟಗಾರರ ಸ್ಮರಣೆ ಹಾಗೂ ಹಿರಿಯ ದಲಿತ ಮುಖಂಡರಿಗೆ ಗೌರವರ್ಪಣೆ, ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಂವಿಧಾನ ಇಲ್ಲದಿದ್ದರೆ ನೀವು ಮಂತ್ರಿಯಾಗಲು ಸಾಧ್ಯವಿತ್ತೆ. ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ಶೇ. 4ರಷ್ಟು ಜೈನರಿರುವ ನಿಮ್ಮನ್ನ ಮಂತ್ರಿಮಾಡಲು ಸಾಧ್ಯವಿತ್ತೆ. ಸಂವಿಧಾನದಿಂದ ನಿಮ್ಮನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಅರ್ಥಮಾಡಿಕೊಂಡು ಕ್ಯಾಬಿನೆಟ್‌ನಿಂದ ಕೈಬಿಡಬೇಕಿತ್ತು, ಅದನ್ನು ಮಾಡಿಲ್ಲ ಎಂದರು.
ನಾವು ಅಂಬೇಡ್ಕರ್ ಅವರ ಮಕ್ಕಳು, ಮರಿಮಕ್ಕಳು. ನಾವು ಬೇರೆಯವರ ಬಗ್ಗೆ ಅವಮಾನಕರವಾಗಿ ಹೀಯಾಳಿಸುವ ಕೆಲಸ ಮಾಡಿಲ್ಲ. ನಿಮ್ಮ ಹೇಳಿಕೆಯಿಂದ ದೇಶವೇ ಹೊತ್ತಿ ಉರಿಯುತ್ತಿದೆ. ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರನ್ನು ಗೌರವಿಸಲಾಯಿತು. ಬಳಿಕ ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಸಂಸ ತಾಲೂಕು ಸಂಚಾಲಕ ಪಿ. ಶಂಕರ್, ಜಿಲ್ಲಾ ಸಂಚಾಲಕ ವಿರೇಶ್, ವಕೀಲ ರಾಜೇಶ್, ಪಪಂ ಸದಸ್ಯ ಅನಿಕೇತನ, ಸಮಾಜ ಸೇವಕ ಕಾಂತರಾಜು, ಹಿರಿಯ ದಲಿತ ಮುಖಂಡ ಸಣ್ಣಸ್ವಾಮಿ, ಟಿಎಚ್‌ಒ ಪುಷ್ಪಲತಾ, ಸಿ. ಸ್ವಾಮಿ ಮತ್ತಿತರಿದ್ದರು.