ತನ್ನ ತಾನರಿಯಲು ವಚನಗಳ ಅಧ್ಯಯನ ಮಾಡಬೇಕು

| Published : Feb 11 2025, 12:48 AM IST

ಸಾರಾಂಶ

ಬೀದರ್‌: ವಚನಗಳಿಗೆ ಮೌಲಿಕ ಸಿದ್ಧಾಂತವಿದೆ. ಸತ್ಯದ ದರ್ಶನ ಅಡಗಿದೆ. ವಚನಗಳಿಗೆ ಸ್ವಾನುಭಾವದ ನೆಲೆಯಿದೆ. ತನ್ನ ತಾನರಿಯಲು ವಚನಗಳ ಅಧ್ಯಯನ ಮಾಡಬೇಕು ಎಂದು ಹುಬ್ಬಳ್ಳಿ ಶ್ರೀ ಗುರುಬಸವ ಟ್ರಸ್ಟ್‌ನ ಶಶಿಧರ ಕರವೀರಶೆಟ್ಟರ ತಿಳಿಸಿದರು.

ಬೀದರ್‌: ವಚನಗಳಿಗೆ ಮೌಲಿಕ ಸಿದ್ಧಾಂತವಿದೆ. ಸತ್ಯದ ದರ್ಶನ ಅಡಗಿದೆ. ವಚನಗಳಿಗೆ ಸ್ವಾನುಭಾವದ ನೆಲೆಯಿದೆ. ತನ್ನ ತಾನರಿಯಲು ವಚನಗಳ ಅಧ್ಯಯನ ಮಾಡಬೇಕು ಎಂದು ಹುಬ್ಬಳ್ಳಿ ಶ್ರೀ ಗುರುಬಸವ ಟ್ರಸ್ಟ್‌ನ ಶಶಿಧರ ಕರವೀರಶೆಟ್ಟರ ತಿಳಿಸಿದರು.

ನಗರದ ಬಸವಗಿರಿಯಲ್ಲಿ ಆಯೋಜಿಸಿದ್ದ ವಚನ ವಿಜಯೋತ್ಸವದಲ್ಲಿ ವಚನ ಸಾಹಿತ್ಯದ ವಿವಿಧ ಆಯಾಮಗಳು ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳು ಪ್ರಜ್ವಲವಾದ ಬೆಳಕಿದ್ದಂತೆ. ಇದು ಬಸವ ಭೂಮಿಯ ಸಂಪತ್ತು, ಶೋಷಿತರನ್ನು ಹಿಂದುಳಿದವರನ್ನು ಮೇಲೆಕ್ಕೆತ್ತಿದವರು ಬಸವಣ್ಣ ಎಂದರು. ವಚನ ಸಾಹಿತ್ಯದ ವಿವಿಧ ಆಯಾಮಗಳಿಗೆ ಅನುಭಾವವೇ ಮೂಲ. ಅನುಭಾವ ವಚನಗಳ ಅಂತರಂಗ, ವಚನಗಳು ಮರ್ತ್ಯಲೋಕದ ಮನದ ಮೈಲಿಗೆ ಕಳೆಯುತ್ತವೆ. ಗುರು, ಲಿಂಗ, ಜಂಗಮ ದರ್ಶನದಿಂದ ಅನುಸಂಧಾನ ಅಳವಟ್ಟು ವ್ಯಕ್ತಿಯ ಕರ್ಮ ಅಳೆದು ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು. ಅಹಂಕಾರ, ಋಣಾತ್ಮಕ ಭಾವನೆ ಕೆಟ್ಟ ವಿಚಾರದಿಂದ ಕತ್ತಲೆ ನಿರ್ಮಾಣ ಸಹಜ, ಇಂಥ ಕಾರ್ಗತ್ತಲೆ ಕಳೆಯಲು ಜಗತ್ತಿಗೆ ಬಸವಣ್ಣನವರು ಬಂದು ವಿಶ್ವಕ್ಕೆ ಜ್ಞಾನ ಕೊಟ್ಟರು. ಅನುಭವ ಮಂಟಪದಲ್ಲಿ ಎಲ್ಲರನ್ನು ಒಗ್ಗೂಡಿಸಿ ವ್ಯಕ್ತಿತ್ವ ನಿರ್ಮಾಣ ಮಾಡಿ ನಿಜದ ನಿಲುವು ಅರಿಯಲು ಎಲ್ಲರನ್ನು ಜಾಗೃತಗೊಳಿಸಿರುವುದೇ ಬಸವಣ್ಣ ಎಂದರು.ಮಾಜಿ ಸಂಸದ ಉಮೇಶ ಜಾಧವ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವ ಪ್ರಜ್ವಲವಾದ ಬೆಳಕಿದ್ದಂತೆ. ಇದು ಬಸವ ಭೂಮಿಯ ಸಂಪತ್ತು, ಶೋಷಿತರನ್ನು ಹಿಂದುಳಿದವರನ್ನು ಮೇಲೆಕ್ಕೆತ್ತಿದವರು ಬಸವಣ್ಣ ಎಂದರು.ಡಾ.ಗಂಗಾಂಬಿಕಾ ಅಕ್ಕ, ಬೇಲೂರಿನ ವಿರಕ್ತಮಠದ ಶಿವಬಸವ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಅನುಭಾವ, ವಚನ ಸಾಹಿತ್ಯದ ಆಶಯಗಳಂತೆ ಬದುಕುತ್ತೇವೆ ಎಂಬ ಬದ್ಧತೆ ಇರಬೇಕು ಎಂದರು.ಶಶಿಕಾಂತ ಪಟ್ಟಣ ಪುಣೆ ಹಾಗೂ ಬಂಡೆಪ್ಪ ಮೂಲಗೆ ಅವರಿಗೆ ಶರಣ ಸೇವಾ ಪುರಸ್ಕಾರ ನೀಡಲಾಯಿತು. ಶಶಿಕಾಂತ ಪಟ್ಟಣ ಅನುಭಾವ ನೀಡಿದರು. ಸಾಹಿತಿ ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ಡಾ.ದೇವಿಕಾ ಅಶೋಕ ನಾಗೂರೆ ಗುರುಪೂಜೆಗೈದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಸುರೇಶ ಚನ್ನಶೆಟ್ಟಿ, ಕಂಟೆಪ್ಪ ದಾನಾ, ಬಾಬುರಾವ್‌ ತುಂಬಾ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಬಸವಕಲ್ಯಾಣ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ತೊಂಡಾರೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ರಮೇಶ ಕಟ್ಟಿಮನಿ, ಮನೋಹರ ಶ್ರೀಮಂಡಲ, ನಗರಸಭೆ ಸದಸ್ಯರಾದ ವೀರಶೆಟ್ಟಿ ಪಾಟೀಲ್‌, ಪ್ರಭುಶೆಟ್ಟಿ ಜ್ಞಾನಪ್ಪನೋರ ಸೇರಿದಂತೆ ಇತರರಿದ್ದರು. ಬಸವಕಲ್ಯಾಣದ ರಂಜನಾ ಭೂಶೆಟ್ಟಿ ಮತ್ತು ಅಕ್ಕನ ಬಳಗದವರಿಂದ ವಚನ ಸಂಗೀತ ನಡೆಯಿತು. ಮಲ್ಲಮ್ಮ ಸ್ವಾಗತಿಸಿದರು. ಶ್ರೀದೇವಿ ಪಾಟೀಲ್‌ ನಿರೂಪಿಸಿದರು. ಕರಣಾ ಶೆಟಕಾರ ವಂದಿಸಿದರು.