ಹಣದ ಆಸೆಗೆ ನದಿ, ಕೆರೆಗಳನ್ನು ಮುಚ್ಚಿ ನಗರದ ನಿರ್ಮಾಣವನ್ನು ಮಾಡಲಾಗಿದ್ದು, ನಗರಗಳಲ್ಲಿ ಮನುಷ್ಯನ ಮಾಲಿನ್ಯದ ಹರಿವು ಹಾಗೂ ಕಾರ್ಖಾನೆಗಳ ತ್ಯಾಜ್ಯಗಳ ನದಿ ನಿರ್ಮಾಣವಾಗಿದೆ.

ಗೋಕರ್ಣ: ಹಣವಂತರಿಗಿಂತ ಶುದ್ಧ ನೀರನ್ನು ಸೇವಿಸುವವನೇ ನಿಜವಾದ ಯೋಗವಂತ. ಶುದ್ಧ ಗಾಳಿ ಹಾಗೂ ಶುದ್ಧ ನೀರು ಮನುಷ್ಯನ ಮೂಲಭೂತ ಅವಶ್ಯಕತೆ. ಹಾಗಾಗಿ ಅವು ಸಿಗುವಲ್ಲಿಯೇ ವಾಸ ಮಾಡಬೇಕು. ದುಡ್ಡಿಗಿಂತ ಶುದ್ಧ ನೀರು ಅಗತ್ಯ ಎಂಬುದನ್ನು ಸಮಾಜ ಆಲೋಚಿಸಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಗುರುವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಕುಡಿಯಲು ಯೋಗ್ಯವಾಗಿರದ ನೀರು ಸಿಗದಿರುವುದು ನಗರ ಜೀವನದ ದೊಡ್ಡ ಅನರ್ಥವಾಗಿದ್ದು, ಯೋಜನಾ ರಹಿತವಾದ ನಗರ ನಿರ್ಮಾಣದಿಂದಾಗಿ ನಗರಗಳು ಕೇವಲ ಮನುಷ್ಯರು ಗುಂಪುಗುಂಪಾಗಿ ಇರುವಂತೆ ಮಾಡಿರುವ ವ್ಯವಸ್ಥೆಗಳಷ್ಟೇ ಆಗಿ ಮಾರ್ಪಟ್ಟಿದೆ.

ಹಣದ ಆಸೆಗೆ ನದಿ, ಕೆರೆಗಳನ್ನು ಮುಚ್ಚಿ ನಗರದ ನಿರ್ಮಾಣವನ್ನು ಮಾಡಲಾಗಿದ್ದು, ನಗರಗಳಲ್ಲಿ ಮನುಷ್ಯನ ಮಾಲಿನ್ಯದ ಹರಿವು ಹಾಗೂ ಕಾರ್ಖಾನೆಗಳ ತ್ಯಾಜ್ಯಗಳ ನದಿ ನಿರ್ಮಾಣವಾಗಿದೆ. ಈ ತ್ಯಾಜ್ಯಗಳೆಲ್ಲವೂ ನದಿಯನ್ನು ಸೇರುತ್ತಿದ್ದು, ನೀರಿನ ಪಾತ್ರಗಳನ್ನು ಮಲಿನಗೊಳಿಸುತ್ತಿವೆ. ಈ ಕಾರಣಗಳಿಂದಾಗಿಯೇ ಆಧುನಿಕ ವಿಜ್ಞಾನವು ನದಿ ನೀರು ಬಳಕೆಗೆ ಯೋಗ್ಯವಲ್ಲ ಎನ್ನುತಿದೆ ಎಂದು ನಗರ ಜೀವನದ ಕುರಿತಾಗಿ ವಿಷಾದ ವ್ಯಕ್ತಪಡಿಸಿದರು.ಆಚಾರ್ಯ ಸುಶೃತರು ಮಳೆಯ ನೀರು ಸಿಗದೇ ಇದ್ದರೆ ಅಥವಾ ಸಂಗ್ರಹ ಖಾಲಿಯಾದರೆ ಭೂಮಿಯ ನೀರನ್ನು ಸೇವಿಸಲು ಸೂಚಿಸಿದ್ದಾರೆ. ಭೂಮಿಯ ನೀರಿನಲ್ಲಿ ಬಾವಿ, ನದಿ, ಕೆರೆ, ಬೆಟ್ಟದ ನೀರು ಸೇರಿದಂತೆ ಏಳು ವಿಧಗಳನ್ನು ಗುರುತಿಸಿದ್ದು, ಇವುಗಳ ಗುಣಾವಗುಣಗಳನ್ನು ವಿಮರ್ಶಿಸಿದ್ದಾರೆ. ಹಾಗೆಯೇ ಕರಾವಳಿ- ಮಲೆನಾಡಿನ ನೀರಿಗಿಂತ ಬಯಲು ಸೀಮೆಯ ನೀರು ಸೇವನೆಗೆ ಯೋಗ್ಯ. ಬಯಲು ಸೀಮೆಯ ನೀರಿಗಿಂತ ಅರೆ ಮಲೆನಾಡಿನ ನೀರು ಉತ್ತಮ ಎಂದು ಆಯುರ್ವೇದ ಸೂಚಿಸಿದೆ. ಮಣ್ಣಿನ ಬಣ್ಣದ ಆಧಾರದ ಮೇಲೆ ನೀರಿನ ರುಚಿಯೂ ಬೇರೆಬೇರೆಯಾಗುತ್ತದೆ ಹಾಗೂ ಋತುಗಳನ್ನು ಆಧರಿಸಿಯೂ ನೀರಿನ ಗುಣ ಧರ್ಮ ಬದಲಾಗುತ್ತದೆ ಎಂದು ವಿವಿಧ ನೀರಿನ ಮೂಲಗಳ ಕುರಿತಾಗಿ ವಿವರಿಸಿದರು.ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶುಕ್ಲ ಯಜುರ್ವೇದ ಪಾರಾಯಣವು ಇಂದು ಸಮಾಪನಗೊಂಡಿತು. ಪಾರಾಯಣವನ್ನು ಮಾಡಿದ ವೇದ ವಿದ್ವಾಂಸರು ಶ್ರೀಗಳಿಂದ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಹೆಗಡೆ ಕಣ್ಣಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಡಾ. ಜಿ.ಎಲ್. ಹೆಗಡೆ, ಶ್ರೀಕಾಂತ್ ಪಂಡಿತ್, ಹೇರಂಭ ಶಾಸ್ತ್ರಿ, ದಿನಪ್ರಧಾನರಾಗಿ ಸಾದಂಗಾಯ ರಾಮಚಂದ್ರ ಭಟ್ ದಂಪತಿಗಳು ಉಪಸ್ಥಿತರಿದ್ದರು.ಕರ್ಕಿ ಜ್ಞಾನೇಶ್ವರಿ ದೈವಜ್ಞ ಮಠದ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಮತ್ತು ತಂಡದವರು ಸುವಸ್ತುಗಳನ್ನು ಸಮರ್ಪಿಸಿ, ಶ್ರೀಗಳ ಆಶೀರ್ವಾದ ಪಡೆದರು.ಸ್ವರ್ಣಪಾದುಕಾ ಪೂಜೆ: ಶ್ರೀಮಠದ ಗುರುಪರಂಪರೆಗೆ ಕನ್ನಡ ವೈಶ್ಯವಾಣಿ ಸಮಾಜ ಬಂಧುಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ಶ್ರೀಗಳ ಆಶೀರ್ವಾದವನ್ನು ಪಡೆದರು. ಚಂದ್ರಕಾಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.