ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಖ್ಯೋಪಾಧ್ಯಾಯರ ಹೊಣೆ ದೊಡ್ಡದು: ಸಚಿವ ತಂಗಡಗಿ

| Published : Feb 01 2025, 12:00 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಖ್ಯೋಪಾಧ್ಯಾಯರ ಹೊಣೆ ದೊಡ್ಡದು: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ ಕೊಪ್ಪಳ ಜಿಲ್ಲೆ 32 ಸ್ಥಾನದಲ್ಲಿತ್ತು. ಇದು ಅತ್ಯಂತ ನೋವಿನ ಸಂಗತಿ. ಈ ಬಾರಿ ಇದರಲ್ಲಿ ಸುಧಾರಣೆ ಮಾಡುವುದು ಶಾಲೆಯ ಮುಖ್ಯೋಪಾಧ್ಯಾಯರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕೊಪ್ಪಳ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ ನಾವು 32 ಸ್ಥಾನದಲ್ಲಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ಈ ಬಾರಿ ಇದರಲ್ಲಿ ಸುಧಾರಣೆ ಮಾಡುವುದು ಶಾಲೆಯ ಮುಖ್ಯೋಪಾಧ್ಯಾಯರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲೆಯ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಫಲಿತಾಂಶ ಕುಸಿಯಲು ನಾನಾ ಕಾರಣಗಳನ್ನು ಈಗಾಗಲೇ ನೀಡಿದ್ದೀರಿ, ಆದರೆ ಕಾರಣ ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಗುರುವಿನ ಸ್ಥಾನ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ಗುರುವಿನ ಸ್ಥಾನಕ್ಕೆ ಅದರದೆ ಆದ ಮಹತ್ವ ಇದೆ. ನಾನಾ ಸಹ ನಿಮ್ಮಂಥ ಗುರುಗಳ ಕೈಯಲ್ಲಿಯೇ ಕಲಿತು ಸಚಿವನಾಗಿದ್ದೇನೆ. ಮುಖ್ಯಾಧ್ಯಾಪಕರ ಹುದ್ದೆ ಗೌರವ ಹೆಚ್ಚಬೇಕು ಎಂದರೆ ನೀವು ನಿಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮಾಡಬೇಕು ಎಂದು ತಾಕಿತು ಮಾಡಿದರು.

ಪರೀಕ್ಷೆಗೆ ಉಳಿದಿರುವುದು 48 ದಿನಗಳ ಮಾತ್ರ. ನಮ್ಮ ಜಿಲ್ಲೆಯನ್ನು ಈ ವರ್ಷ ಮೊದಲ ಸ್ಥಾನದಲ್ಲಿ ತರುವ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ಗುರಿ. ನೀವೆಲ್ಲ ಸಹಕಾರ ನೀಡಬೇಕು. ಇಂದಿನಿಂದಲೇ ಕಾರ್ಯಗತರಾಗಬೇಕು ಎಂದರು.

ಪ್ರಾಥಮಿಕ ಶಾಲೆ ಶಿಕ್ಷಕರ ಮೇಲೂ ಕ್ರಮ: ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರೆಯುವಂತೆ ಆಗಬೇಕು. ಓದಲು ಬರೆಯಲು, ಬಾರದಿರುವ ಮಕ್ಕಳನ್ನು ನಾವು ಎಸ್‌ಎಸ್‌ಎಲ್‌ಸಿ ಹೇಗೆ ಪಾಸ್ ಮಾಡಿಸಬೇಕು ಎಂದು ಕೇಳಿದ್ದೀರಿ, ಹಾಗಂತ ಜವಾಬ್ದಾರಿಯಿಂದ ನುಣಚಿಕೊಳ್ಳುವಂತೆ ಮಾಡಬೇಡಿ. ಆದರೆ, ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ಸಮಸ್ಯೆ ಇರುವುದು ಗೊತ್ತಾಗಿದೆ. ಹೀಗಾಗಿ, ನಾವು ಇನ್ಮುಂದೆ ಪ್ರಾಥಮಿಕ ಹಂತದಿಂದಲೇ ಶಿಕ್ಷಣ ಸುಧಾರಣೆಗೆ ಪ್ರಯತ್ನಿಸುತ್ತೇವೆ. ಈ ಕುರಿತು ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.

ಗಣಿತದಲ್ಲಿ ನಾನು ಹಿಂದೆ: ನನಗೂ ಗಣಿತ ಎಂದರೆ ಕೈಕಾಲು ನಡುಗುತ್ತಿದ್ದವು. ಏನು ಮಾಡಿದರೂ ಗಣಿತ ಬರುತ್ತಿರಲಿಲ್ಲ. ಆದರೂ ನಮ್ಮ ಗುರುಗಳು ನಮಗೆ ಹೊಡೆದು, ಬಡಿದು ಕಲಿಸಿದರು. ಈಗ ಹಾಗೆ ಮಾಡುವಂತೆ ಇಲ್ಲ ಎಂದು ಸಚಿವ ತಂಗಡಗಿ ಹೇಳಿದರು.ಹೊತ್ತುಕೊಂಡು ಬರುತ್ತಿದ್ದರು: ನಾವು ಓದುತ್ತಿದ್ದಾಗ ಶಾಲೆಗೆ ಬರದೆ ಇದ್ದರೇ ಹೊತ್ತುಕೊಂಡು ಬರುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು ಬಡಿದರೆ ಮನೆಯವರು ಬಂದು ಇನ್ನೊಂದೆರಡು ಹೊಡೆಯುವಂತೆ ಹೇಳುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ನೀವು ಸಹ ಶಾಲೆಯಿಂದ ಹೊರಗುಳಿದ ಮಕ್ಕಳ ಮನವೊಲಿಸಿ, ಕರೆದುಕೊಂಡು ಬರಬೇಕು ಎಂದು ತಂಗಡಿ ಹೇಳಿದರು.ಚೆನ್ನಾಗಿ ಓದಿದ್ದರೆ ಅಧಿಕಾರಿಯಾಗಿರುತ್ತಿದ್ದೆ: ನಾನು ಆಗ ಚೆನ್ನಾಗಿ ಓದಿದ್ದರೆ ಐಎಎಸ್, ಐಪಿಎಸ್ ಅಥವಾ ಇನ್ಯಾವುದೋ ಅಧಿಕಾರಿಯಾಗಿರುತ್ತಿದ್ದೆ. ಆದರೆ, ಚೆನ್ನಾಗಿ ಓದಲಿಲ್ಲ. ಈಗ ಮಂತ್ರಿಯಾಗಿದ್ದೇನೆ, ಆ ಮಾತು ಬೇರೆ. ಇದೆಲ್ಲವೂ ನಮಗೆ ಗುರುಗಳು ಕಲಿಸಿದ ಫಲ ಎಂದು ಶಿವರಾಜ ತಂಗಡಗಿ ಹೇಳಿದರು.ಕನ್ನಡಪ್ರಭ ವರದಿ ಪ್ರಸ್ತಾಪ: ಎಸ್‌ಎಸ್‌ಎಲ್‌ಸಿಯಲ್ಲಿರುವ ಏಳು ಸಾವಿರ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಬರುತ್ತಿಲ್ಲ ಎನ್ನುವ ಕುರಿತು ಕನ್ನಡಪ್ರಭ ವರದಿ ಮಾಡಿದ್ದನ್ನು ಸಚಿವ ಶಿವರಾಜ ತಂಗಡಿ ಪ್ರಸ್ತಾಪ ಮಾಡಿದರು. ಇದು ಸದನದಲ್ಲಿಯೂ ಚರ್ಚೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ನಳಿನ್ ಅತುಲ್ ಮಾತನಾಡಿ, ಕಾರಣ ಹೇಳದೆ ಫಲಿತಾಂಶ ಸುಧಾರಣೆ ಮಾಡಿ, ಓದಲು ಬಾರದಿರುವ ಮಕ್ಕಳಿದ್ದಾರೆ ಎಂದು ಹೇಳಿದ್ದೀರಿ, ಆದರೆ, ಆ ಮಕ್ಕಳು ಎರಡು ವರ್ಷ ನಿಮ್ಮ ಕೈಯಲ್ಲಿಯೇ ಕಲಿತಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರು. ಹೀಗಾಗಿ, ಹೇಗಾದರೂ ಮಾಡಿ ಕಲಿಸಿ ಎಂದರು.ಜಿಪಂ ಸಿಇಒ ರಾಹುಲ್ ರತ್ಮಂ ಪಾಂಡೆ, ಎಸ್ಪಿ ರಾಮ ಎಲ್. ಅರಸಿದ್ದಿ, ಜಿಪಂ ಡಿಎಸ್ ಮಲ್ಲಿಕಾರ್ಜುನ ತೊದಲಬಾವಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಇದ್ದರು. ಡಿಡಿಪಿಐ ಶ್ರೀಶೈಳ ಬಿರಾದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.