ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೋಗ ಮುಕ್ತವಾಗಲು ಉತ್ತಮ ಸಾಹಿತ್ಯ ಅಧ್ಯಯನ ಮಾಡಬೇಕು. ಸಾಹಿತ್ಯ ಅಧ್ಯಯನದ ಪ್ರಭಾವದಿಂದಲೂ ಮನಸ್ಸಿಗೆ ದೃಢತೆ ಹಾಗೂ ಧೈರ್ಯ ಉಂಟಾಗುತ್ತದೆ ಎಂದು ಸಾಹಿತಿ ಹಾಗೂ ವೈದ್ಯ ಡಾ.ಗುರುಕಿರಣ್ ತಿಳಿಸಿದರು.ತಾಲೂಕು ಕಸಾಪ. ಕರ್ನಾಟಕ ಗಮಕಲಾ ಪರಿಷತ್ತು,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಉತ್ತಮ ಆರೋಗ್ಯ ಸಾಹಿತ್ಯದ ಪ್ರಭಾವ ಹಾಗೂ ವಿಶ್ವ ಹೋಮಿಯೋ ದಿನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹೋಮಿಯೋ ಡಾ.ಸ್ಯಾಮ್ಯುಯೆಲ್ ಹಾನೆಬನ್ ಅವರಿಂದ ಹೂಮಿಯೋ ಚಿಕಿತ್ಸಾ ಪದ್ಧತಿ ದಿನವಾಗಿ ಪ್ರತಿ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋ ದಿನವನ್ನಾಗಿ ಆಚರಿಸಲಾಗುವುದು. ಜರ್ಮನಿಯಲ್ಲಿ ವ್ಯಾಪಕವಾಗಿದ್ದು ವಿಶ್ವದ ಎಲ್ಲ ದೇಶಗಳಲ್ಲೂ ಹೋಮಿಯೋ ಚಿಕಿತ್ಸಾ ಕ್ರಮ ವ್ಯಾಪಕವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸಾ ಕ್ರಮದ ಮೂಲಕ ರೋಗ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಳ್ಳೇಗಾಲ ಜೆಎಸ್ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹದೇವಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅಲೋಪತಿ, ಆಯುರ್ವೇದ ,ಹೋಮಿಯೋಪತಿ, ಮುಂತಾದ ಚಿಕಿತ್ಸಾ ಕ್ರಮಗಳಿವೆ. ಅಧಿಕ ವೆಚ್ಚದಿಂದ ಕೂಡಿರುವ ಪದ್ಧತಿಯನ್ನು ವ್ಯಕ್ತಿ ದೂರಿಕರಿಸುತ್ತಾನೆ. ಉತ್ತಮ ಸಾಹಿತ್ಯ ಅಧ್ಯಯನದಿಂದ ಮನಸ್ಸು ಹಗುರವಾಗಿ ರೋಗಮುಕ್ತರಾಗಲು ಸಹಕಾರಿಯಾಗುವುದು ಎಂದರು.ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯವಲ್ಲದೆ ಸಂಸ್ಕೃತಿ, ಪರಂಪರೆ , ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಜ್ಞಾನ ವೃದ್ಧಿಗಾಗಿ ಉಪನ್ಯಾಸ ಮಾಲಿಕೆಯನ್ನು ರೂಪಿಸಿದೆ. ಮನುಷ್ಯ ಸದಾ ಬಾಹ್ಯ ಮತ್ತು ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಪುಸ್ತಕಗಳ ಅಧ್ಯಯನ ಮಾಡಬೇಕು. ವೈದ್ಯಕೀಯ ಪದ್ಧತಿಗಳ ವಿಚಾರಪೂರಿತ ಗ್ರಂಥಗಳು ಸಾಕಷ್ಟಿವೆ. ಭಾರತದ ಚರಕ ಸಂಹಿತೆ , ಸುಶ್ರುತ ಸಂಹಿತೆ ಪ್ರಾಚೀನ ಭಾರತದ ಶ್ರೇಷ್ಠ ವೈದ್ಯಕೀಯ ಕೃತಿಗಳಾಗಿವೆ. ಹೊಸ ಆವಿಷ್ಕಾರದ ವೈಜ್ಞಾನಿಕ ಪದ್ಧತಿ ಜೊತೆಗೆ ಹೋಮಿಯೋ ಪದ್ಧತಿಯು ರೂಢಿಯಲ್ಲಿದೆ. ವಿವಿಧ ರೀತಿಯಲ್ಲಿ ಚಿಕಿತ್ಸಾಕ್ರಮ ಇರುವುದರಿಂದ ಸರಿಯಾದ ಚಿಕಿತ್ಸೆಯನ್ನು ಗುರುತಿಸಬೇಕು. ವೈದ್ಯಕೀಯ ಅಧ್ಯಯನವೊ ಕನ್ನಡ ಭಾಷೆಯಲ್ಲಿ ಹೆಚ್ಚು ಬರೆಯಲ್ಪಡಬೇಕು. ಯಾವುದೇ ಚಿಕಿತ್ಸಾ ಪದ್ಧತಿಯು ದೇಶಿಯ ಭಾಷೆಗಳಲ್ಲಿ ಇದ್ದಾಗ ರೋಗಿಗೆ ವಿಶೇಷವಾಗಿ ತಿಳಿಯಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಡಿ.ಲೋಕೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಕುಸುಮಾ ಋಗ್ವೇದಿ, ಪ್ರಫುಲ್ಲಾ ಗುರುಕಿರಣ್, ಸರಸ್ವತಿ ,ಶಿವಲಿಂಗ ಮೂರ್ತಿ, ವಾಸಂತಿ, ಗೀತಾ ಕೃಷ್ಣವೇಣಿ, ಲಕ್ಷ್ಮೀನರಸಿಂಹ, ಉಪನ್ಯಾಸಕ ಸುರೇಶ್, ಜನಪದ ಮಹೇಶ, ರವಿ,ಪರಮೇಶ್ವರಪ್ಪ ಉಪಸ್ಥಿತರಿದ್ದರು.