ಸಾರಾಂಶ
ಶಿರಸಿ: ಆಹಾರದಲ್ಲಿ ನಿಯಮ ಪಾಲನೆಯಿಂದ ಆರೋಗ್ಯ, ಆಧ್ಯಾತ್ಮಿಕ ಉನ್ನತಿ ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಮದ್ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಚಾತುರ್ಮಾಸ ವ್ರತಾಚರಣೆ ಹಿನ್ನೆಲೆಯಲ್ಲಿ ಶಿರಸಿ ಸೀಮೆ ಬೆಟ್ಟಳ್ಳಿ ಭಾಗಿ ಹಾಗೂ ಶಿರಸಿ ಸೀಮಾ ಒಳಭಾಗಿಗಳ ಸಮಸ್ತ ಶಿಷ್ಯರಿಂದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಎಲ್ಲರ ಜೀವನದಲ್ಲಿ ಆಹಾರಕ್ಕೆ ಬಹಳ ಮಹತ್ವವಿದೆ. ಮನುಷ್ಯನ ಜೀವನದಲ್ಲಿ ಇನ್ನು ಹೆಚ್ಚಿನ ಮಹತ್ವ ಆಹಾರಕ್ಕೆ ಇದೆ. ಮನುಷ್ಯ ಕೇವಲ ಉಳಿದ ಪ್ರಾಣಿಗಳ ಹಾಗೆ ಹೊಟ್ಟೆ ತುಂಬಿಕೊಳ್ಳಲು ಮಾತ್ರ ಆಹಾರವನ್ನು ತೆಗೆದುಕೊಳ್ಳುವುದಿಲ್ಲ ಎಂದರು.ಆರೋಗ್ಯ ಮತ್ತು ಆಧ್ಯಾತ್ಮಿಕ ಉನ್ನತಿ. ನಾವು ಸ್ವೀಕರಿಸಿದ ಆಹಾರವು ಆರೋಗ್ಯವನ್ನು ನೀಡಬೇಕು ಮತ್ತು ಆಧ್ಯಾತ್ಮಿಕ ಉನ್ನತಿಗೆ ಸಹಾಯ ಮಾಡಬೇಕು ಎಂಬ ಮಹತ್ತರವಾದ ಎರಡು ಆಲೋಚನೆ ಇರುತ್ತದೆ. ನಾವು ಸ್ವೀಕರಿಸಿದ ಆಹಾರದಿಂದ ನಮ್ಮ ಆಧ್ಯಾತ್ಮಿಕ ಉನ್ನತಿ ಯಾಗಬೇಕೆಂದರೆ ಆಹಾರದಲ್ಲಿ ನಿಯಮ ಪಾಲನೆ ಬಹಳ ಮುಖ್ಯ. ಆಹಾರಕ್ಕೂ ಮತ್ತು ಆಧ್ಯಾತ್ಮಿಕ ಉನ್ನತಿಗೂ ನೆರವಾದ ಸಂಬಂಧ ಇದೆ. ಆಹಾರ ಶುದ್ಧಿ ಇದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಸತ್ವ ಶುದ್ಧಿಗೆ ಇನ್ನೂ ಬೇರೆ ಬೇರೆ ಕಾರಣಗಳು ಇವೆ. ಆದರೆ ಮೂಲಭೂತ ಕಾರಣ ಆಹಾರ ಶುದ್ಧಿ ಎಂದರು.
ಸೇವಿಸಿದ ಆಹಾರದ ಸೂಕ್ಷ್ಮವಾದ ಭಾಗವು ಮನಸ್ಸಿಗೆ ಸೇರ್ಪಡೆಯಾಗುತ್ತದೆ ಎಂದು ಉಪನಿಷತ್ತು ಪ್ರತಿಪಾದಿಸುತ್ತದೆ. ಮನಸ್ಸು ಅನ್ನದ ಒಂದು ವಿಕಾರವೇ ಆಗಿದೆ. ಅನ್ನದ ಸೂಕ್ಷ್ಮವಾದ ಭಾಗವು ಸೇರ್ಪಡೆಯಾಗುವ ಒಂದು ಪ್ರಕ್ರಿಯೆ ನಮ್ಮ ದೇಹದಲ್ಲಿದೆ. ಒಟ್ಟಾರೆ ಮನಸ್ಸಿಗೂ ಆಹಾರಕ್ಕೂ ಒಂದು ಸಂಬಂಧವಿದೆ. ಮನಸ್ಸಿಗೆ ಒಂದು ಒಳ್ಳೆಯತನ ಹಾಗೂ ಮನಸ್ಸು ಶುದ್ಧಿಯಾಗಬೇಕಾದರೆ ಆಹಾರ ಶುದ್ಧಿ ಇರಬೇಕು. ಅದನ್ನು ನಾವು ಪಾಲಿಸಿದರೆ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ನಾವು ಬರಿ ಪೂಜೆ ಮತ್ತು ಜಪವನ್ನು ಮಾಡಿದರೆ ಮಾತ್ರ ಸಾಲದು ಆಹಾರದ ಶುದ್ಧಿಯು ಅತ್ಯಂತ ಅವಶ್ಯಕ. ಆಹಾರ ಶುದ್ಧಿಯಿಲ್ಲದೆ ಮಾಡಿದ ಪೂಜೆ ಜಪಗಳು ಅಷ್ಟು ಫಲಕಾರಿಯಾಗುವುದಿಲ್ಲ ಎಂದರು.ಎಲ್ಲರೂ ನೋಡುವುದು ಮೊದಲು ಆರೋಗ್ಯ. ಯಾವುದು ರುಚಿಯಾಗಿದೆಯೋ ಅದು ಆರೋಗ್ಯಕ್ಕೆ ಅಷ್ಟು ಹಿತವಲ್ಲ. ಇದು ನನ್ನ ಆರೋಗ್ಯಕ್ಕೆ ಹಿತವೋ ಅಹಿತವೊ ಎಂಬ ಚಿಂತನೆಯನ್ನು ಮಾಡಿಯೇ ಆಹಾರವನ್ನು ಸೇವಿಸಬೇಕು. ಆದ್ದರಿಂದ ಆರೋಗ್ಯದ ಬಗ್ಗೆ ನಮ್ಮ ಲಕ್ಷ್ಯ ಇರಬೇಕು. ಹೆಚ್ಚಿನ ರೋಗಗಳೆಲ್ಲವೂ ಆಹಾರದಿಂದಲೇ ಬರುತ್ತದೆ. ಆರೋಗ್ಯಕ್ಕೆ ಏನೆಲ್ಲ ಕಾರಣಗಳು ಇವೆ ಎಂಬುದನ್ನು ಆಯುರ್ವೇದ ಶಾಸ್ತ್ರ ಅತ್ಯಂತ ವಿಸ್ತಾರವಾಗಿ ಹೇಳಿದೆ ಎಂದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು. ಸತ್ಯನಾರಾಯಣ ಭಟ್ಟ ವರ್ಗಾಸರ, ಶ್ರೀಪಾದ ಹೆಗಡೆ ಸಣ್ಣಳ್ಳಿ, ನರಸಿಂಹ ದೀಕ್ಷಿತ ದತ್ತಾತ್ರೇಯ ಹೆಗಡೆ, ಸೀತಾರಾಮ ಹೆಗಡೆ ನೀರ್ನಳ್ಳಿ ಮತ್ತಿತರರು ಇದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ೯೫ ಅಕ್ಕೂ ಹೆಚ್ಚು ಪ್ರತಿಶತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು.