ಕಿಕ್ಕೇರಿ:
ಗ್ರಾಮೀಣ ಪ್ರದೇಶದ ದುರ್ಬಲರ ಬದುಕಿಗೆ ಉಚಿತ ಆರೋಗ್ಯ ಶಿಬಿರಗಳು ಆರೋಗ್ಯಕರ ಜೀವನಕ್ಕೆ ಆಸರೆಯಾಗಿವೆ ಎಂದು ರೈತ ಸಂಘದ ಹಿರಿಯ ಮುಖಂಡ ಮಂದಗೆರೆ ಜಯರಾಂ ತಿಳಿಸಿದರು.ಸಮೀಪದ ಚಿಕ್ಕಮಂದಗೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಆರೋಗ್ಯ ಶಿಬಿರಗಳಿಂದ ರೈತಾಪಿ ವರ್ಗ, ಬಡ ಸಮುದಾಯಕ್ಕೆ ಅನುಕೂಲವಾಗಲಿದೆ. ಶಿಬಿರದ ಪ್ರಯೋಜನ ಪಡೆದು ಜನರು ಆರೋಗ್ಯವಂತರಾಗಿ ಸದೃಡ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ತಾಲೂಕು ಯೋಜನಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಸಂಸ್ಥೆ ಆರೋಗ್ಯ, ಶಿಕ್ಷಣ, ಸ್ವಾವಲಂಬನೆ ಬದುಕಿಗೆ ಹತ್ತಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಶಿಕ್ಷಣಕ್ಕೆ ಮಕ್ಕಳಿಗೆ ವಿಶೇಷ ಒತ್ತು ನೀಡಿ ಎಂದು ಸಲಹೆ ನೀಡಿದರು.ರೈತ ಮಹಿಳಾ ಹೋರಾಟಗಾರರಾದ ನಂದಿನಿ ಜಯರಾಂ ಮಾತನಾಡಿ, ರಾಸಾಯನಿಕ ಮುಕ್ತ ಆಹಾರ ಜೀವನ ಶೈಲಿಗೆ ಬದಲಾಗಬೇಕು. ಸಾವಯವ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಬೇಕು. ಆರೋಗ್ಯ ಜಾಗೃತಿಗಾಗಿ ಸಂಸ್ಥೆ ಸಾವಯವ ಕೃಷಿಗೆ ರೈತರಿಗೆ ಉತ್ತೇಜಿಸುತ್ತಿದೆ. ಇದನ್ನು ಪಾಲಿಸಬೇಕು ಎಂದರು.
ಈ ವೇಳೆ ಅಪೂರ್ವ ನ್ಯೂ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಸ್ನೇಹ ಹಾಗೂ ಸಿಬ್ಬಂದಿ ಹಾಗೂ ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರಾ, ಬಿಪಿ, ಮಧುಮೇಹ, ಹೃದಯ ಸಂಬಂಧಿ ರೋಗಿಗಳಿಗೆ ತಪಾಸಣೆ ಮಾಡಲಾಯಿತು. ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಸೇವಾ ಪ್ರತಿನಿಧಿ ಮಂಗಳಾ, ಮಂಜೇಗೌಡ, ನಿಂಗಮ್ಮ, ಗ್ರಾಮ ಮುಖಂಡರು ಇದ್ದರು. ಶ್ರೀಚಾಮುಂಡೇಶ್ವರಿ ದೇವಿ ಭಾವಚಿತ್ರಕ್ಕೆ ಆಷಾಢ ಮಾಸದ ವಿಶೇಷ ಪೂಜೆ ಸಲ್ಲಿಕೆ
ಹಲಗೂರು:ಕನಕಪುರ ರಸ್ತೆಯ ಎಚ್ಎಂಎಸ್ ಕಾಂಪ್ಲೆಕ್ಸ್‌ನಲ್ಲಿ ಆಷಾಢ ಮಾಸದ ಮಂಗಳವಾರ ಚಾಮುಂಡೇಶ್ವರಿ (ತ್ರಿಪುರ ವಾಸಿನಿ)ದೇವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಹಲಗೂರು ಭಾವಸಾರ ಕ್ಷತ್ರಿಯ ಸಮಾಜದಿಂದ ಬೆಳಗ್ಗೆ ಮುತ್ತೈದೆಯರು ಮತ್ತು ಪುಟಾಣಿ ಹೆಣ್ಣುಮಕ್ಕಳು ಕಳಶ ಹೊತ್ತು ಮೆರವಣಿಗೆ ಮುಖಾಂತರ ಮುತ್ತತ್ತಿ ರಸ್ತೆಯ ವಿದ್ಯಾಗಣಪತಿ ದೇವಸ್ಥಾನದ ಆವರಣದಲ್ಲಿ ಗಂಗಾ ಪೂಜೆ ನೆರವೇರಿಸಿ ನಂತರ ಚಾಮುಂಡೇಶ್ವರಿ (ತ್ರಿಪುರವಾಸಿನಿ) ಭಾವಚಿತ್ರ ಇಟ್ಟು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮುತ್ತೈದೆಯರು ವಿಶೇಷವಾಗಿ ಬೆಲ್ಲ ದಾರತಿ ಕರ್ಪೂರದ ಆರತಿ ಬೆಳಗಿ ಪೂಜಾ ಪುನಸ್ಕಾರ ನಡೆಸಿದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.ಹಲಗೂರು ಗ್ರಾಮದ ವಾಸಿ ಅಮೃತ ಮಾತನಾಡಿ, ಸಮಾಜದಿಂದ ನಾವು ಮೂರು ವರ್ಷದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಎರಡು ದಿನಗಳ ಕಾಲ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದೇವೆ ಎಂದರು.ಈ ದೇವರು ಆದಿಶಕ್ತಿಯಾಗಿದ್ದು, ನಂಬಿದ ಭಕ್ತರ ಕೈ ಬಿಡದೆ ನಡೆಸುವ ಈ ತಾಯಿಯ ಕೃಪೆಗೆ ನಾವೆಲ್ಲ ಪಾತ್ರರಾಗಿದ್ದೇವೆ. 22ನೇ ಬುಧವಾರ ಸಹ ಪೂಜೆ ಪುನಸ್ಕಾರ ನಡೆಸಿ ಪ್ರಸಾದ ವಿನಿಯೋಗಿಸಲಾಗುತ್ತದೆ ಎಂದರು.ಈ ವೇಳೆ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಹಲಗೂರು ಮತ್ತು ಮಳವಳ್ಳಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.