ಆಹಾರ,ವಿಹಾರ, ಆಚಾರ, ವಿಚಾರ ಉತ್ತಮವಾಗಿದ್ದರೆ ಆರೋಗ್ಯವಾಗಿರಬಹುದು: ಡಾ.ಅಮೃತ ಸಲಹೆ

| Published : Sep 24 2024, 01:50 AM IST

ಸಾರಾಂಶ

ನರಸಿಂಹರಾಜಪುರಆಹಾರ, ವಿಹಾರ, ಆಚಾರ ಹಾಗೂ ವಿಚಾರ ಚೆನ್ನಾಗಿದ್ದರೆ ಪ್ರತಿಯೊಬ್ಬರೂ ಆರೋಗ್ಯವಾಗಿರಬಹುದು ಎಂದು ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬ್ಯಾಚಲರ್ ನ್ಯಾಚರೋಪತಿ ಅಂಡ್ ಯೋಗಿಕ್ ಸೈನ್ ನ ಡಾ. ಅಮೃತ ಸಲಹೆ ನೀಡಿದರು.

- ಕುದುರೆಗುಂಡಿಯಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ಆರೋಗ್ಯ-ಯೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಆಹಾರ, ವಿಹಾರ, ಆಚಾರ ಹಾಗೂ ವಿಚಾರ ಚೆನ್ನಾಗಿದ್ದರೆ ಪ್ರತಿಯೊಬ್ಬರೂ ಆರೋಗ್ಯವಾಗಿರಬಹುದು ಎಂದು ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬ್ಯಾಚಲರ್ ನ್ಯಾಚರೋಪತಿ ಅಂಡ್ ಯೋಗಿಕ್ ಸೈನ್ ನ ಡಾ. ಅಮೃತ ಸಲಹೆ ನೀಡಿದರು.

ಭಾನುವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಭಾ ಭವನದಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ನಡೆದ ಆರೋಗ್ಯ ಮತ್ತು ಯೋಗದ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಜೀವನಶೈಲಿ ಹಾಗೂ ಯೋಗದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಜೀವನ ಶೈಲಿ ವ್ಯತ್ಯಾಸವಾಗಿರುವುದರಿಂದಲೇ ಎಲ್ಲಾ ಕಾಯಿಲೆಗಳು ಬರುತ್ತಿದೆ. ಚಿಂತೆಯೇ ಅನಾರೋಗ್ಯಕ್ಕೆ ಮೂಲ ಕಾರಣ. ಬೇಗನೆ ಮಲಗಿ, ಬೇಗನೆ ಏಳುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು. ಮನಸ್ಸು ಹಿಡಿದಿಟ್ಟುಕೊಳ್ಳಲು ಯೋಗ ಸಹಕಾರಿ. ಸಕ್ಕರೆ, ಎಣ್ಣೆ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.

ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದ ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಡಾ.ಸಂಗೀತ ಮಹಿಳೆಯರ ಆರೋಗ್ಯ ಬಗ್ಗೆ ಮಾತನಾಡಿ, ಮುಖ್ಯವಾಗಿ ಮಹಿಳೆಯರಿಗೆ ಋತು ಚಕ್ರದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಲೈಪ್ ಸ್ಟೈಲ್ ಬದಲಾಗಿದ್ದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. 40 ರಿಂದ 45ನೇ ವಯಸ್ಸಿನಲ್ಲಿ ಮಹಿಳೆಯರಿಗೆ ಮುಟ್ಟು ನಿಲ್ಲುವ ಸಮಯದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದ ಅನಾರೋಗ್ಯ ಕಾಡುತ್ತದೆ. ಆ ಸಮಯದಲ್ಲಿ ಮಂಡಿ ನೋವು, ಸೊಂಟ ನೋವು ಕಾಣಿಸುತ್ತದೆ. ಮುಖ್ಯವಾಗಿ ಸಾಕಷ್ಟು ನೀರನ್ನು ಮಹಿಳೆಯರು ಕುಡಿಯಬೇಕು. ಊಟಕ್ಕೆ ಅನ್ನದ ಜೊತೆಗೆ ಸಿರಿಧಾನ್ಯ, ಜೋಳ, ರಾಗಿ ಸಹ ತಿನ್ನಬೇಕು. ದಿನಕ್ಕೆ 1 ಗಂಟೆ ವ್ಯಾಯಾಮ, ಬೆಳಗ್ಗೆ ಪ್ರಾರ್ಥನೆ ಮಾಡಬೇಕು. ವಾರಕ್ಕೆ ಒಂದು ಹೊತ್ತು ಉಪವಾಸ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಸಂಘಟನಾ ಕಾರ್ಯದರ್ಶಿ ಪಲ್ಲವಿ ಪ್ರಶಾಂತ್ ಮಾತನಾಡಿ, ಭಾರತ ದೇಶ ಪ್ರಪಂಚಕ್ಕೇ ಯೋಗ ಕಲಿಸಿದೆ. ವಿದೇಶಿಯರು ಭಾರತದ ಯೋಗದ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದಾರೆ. ದೇಹ ಹಾಗೂ ಮನಸ್ಸನ್ನು ಹತೋಟಿ ಯಲ್ಲಿಟ್ಟುಕೊಳ್ಳಲು ಯೋಗ ಸಹಕಾರಿಯಾಗಲಿದೆ. ಮಹಿಳೆಯರು ಯೋಗಾಸನ ಮಾಡಲು ಸಮಯ ನಿಗದಿ ಮಾಡಿಕೊಳ್ಳಬೇಕು ಎಂದರು. ನಂತರ ಮಹಿಳೆಯರಿಗೆ ಸರಳವಾದ ಯೋಗಾಸನ, ಪ್ರಾಣಾಯಾಮ ಕಲಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ಗಾಯಿತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತ ಪ್ರಭಾಕರ್ ವಹಿಸಿದ್ದರು. ವೀಣಾ, ಸುಧಾ, ರಮ ಗುರ್ಜರ್, ಶ್ರೀಲಕ್ಷ್ಮಿ , ಇದ್ದರು.