ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆ: ಜಿ.ಎಸ್. ಪಾಟೀಲ್‌

| Published : Mar 12 2024, 02:07 AM IST

ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆ: ಜಿ.ಎಸ್. ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಪದಗ್ರಹಣ, ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಉದ್ಘಾಟಿಸಲಾಯಿತು.

ಗಜೇಂದ್ರಗಡ: ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಉನ್ನತ ಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಪದಗ್ರಹಣ, ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಉದ್ಘಾಟಿಸಿ ಅವರು ಮಾತನಾಡಿದರು. ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞೆ, ಅರವಳಿಕೆ ತಜ್ಞರು ಬಂದಿರುವುದು ಸಂತಸದ ವಿಷಯವಾಗಿದೆ. ಸಮಾಜದಲ್ಲಿರುವ ಬಡವರಿಗೂ ಉಚಿತ, ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ಎನ್.ಐ.ಸಿ.ಯು.ನಲ್ಲಿ ಚಿಕಿತ್ಸೆ ಕೊಡಿಸಿದರೆ ಒಂದು ದಿನಕ್ಕೆ ₹೬ರಿಂದ ₹೧೨ ಸಾವಿರ ಭರಿಸಬೇಕಾಗುತ್ತದೆ. ಇಂತಹ ಸೌಲಭ್ಯ ಇಲ್ಲಿ ಉಚಿತವಾಗಿ ಲಭಿಸುತ್ತಿದ್ದು, ಬಡವರಿಗೆ ಅನುಕೂಲವಾಗಲಿದೆ ಎಂದರು.

ಎಲ್ಲ ವೈದ್ಯರು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಿ ನಿಮಗೆ ಬೇಕಾಗುವ ಎಲ್ಲ ಸಹಕಾರ ನೀಡಲಾಗುವುದು. ಈ ಆಸ್ಪತ್ರೆಯನ್ನು ೧೦೦ ಹಾಸಿಗೆ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತೇನೆ ಎಂದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನಿಲಕುಮಾರ ತೋಟದ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಪ್ರಸೂತಿ, ಅರವಳಿಕೆ, ಚಿಕ್ಕ ಮಕ್ಕಳ ತಜ್ಞರು ಸೇರಿದಂತೆ ಹಲವು ವೈದ್ಯರಿದ್ದು, ಜನರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತೇವೆ. ನಮ್ಮ ಈ ಕೆಲಸಕ್ಕೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದರು.

ಇದೇ ವೇಳೆ ಪದಗ್ರಹಣ ಮಾಡಿದ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಖಂಡರಾದ ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪೂರ, ಅಶೋಕಕುಮಾರ ಬಾಗಮಾರ ಮಾತನಾಡಿದರು.

ಪುರಸಭೆ ವಿರೋಧ ಪಕ್ಷದ ನಾಯಕ ಮುರ್ತುಜಾ ಡಾಲಾಯತ, ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಡಾ. ವೀಣಾ ಹಾದಿ, ಡಾ. ಗಗನಾ, ಡಾ. ಕಾಶೀನಾಥ ಪೂಜಾರ, ಡಾ. ರಾಘವೇಂದ್ರ ಕೊಪ್ಪಳ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ, ಶರಣು ವದೇಗೋಳ, ಮುಖಂಡರಾದ ಶ್ರೀಧರ ಬಿದರಳ್ಳಿ, ಸಿದ್ದು ಗೊಂಗಡಶೇಟ್ಟಿಮಠ, ಶರಣಪ್ಪ ಚಳಗೇರಿ, ಅರಿಹಂತ ಬಾಗಮಾರ, ರೇಣುಕಾ ಕುಂಬಾರ, ಎ.ಡಿ. ಕೋಲಕಾರ ಇತರರು ಇದ್ದರು.