ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಮ್ಮ ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಂಡು ನೆರೆಹೊರೆಯವರಿಗೂ ಕೂಡ ಆರೋಗ್ಯದ ಬಗ್ಗೆ ತಾವೆಲ್ಲರೂ ಆರಿವು ಮೂಡಿಸಬೇಕು ಎಂದು ಐಇಟಿ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಪಿ. ಗೀತಾಂಜಲಿ ತಿಳಿಸಿದರು.
ಕುವೆಂಪುನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ವತಿಯಿಂದ ನೈರ್ಮಲ್ಯ ಹಾಗೂ ಆರೋಗ್ಯ ರಕ್ಷಣೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಅರಿಯಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಧನ್ವಂತರಿ ಆಯುರ್ವೇದಾಲಯದ ಸ್ತ್ರೀರೋಗ ತಜ್ಞರಾದ ಡಾ. ಎಂ. ಶ್ರುತಿ ಮಾತನಾಡಿ, ಆಧುನಿಕ ಕಾಲದಲ್ಲಿ ಎಲ್ಲರೂ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ಮನಸ್ಸು ಮತ್ತು ದೇಹದ ಪ್ರತಿಯೊಂದು ಭಾಗವು ಸಾಮರಸ್ಯದಿಂದ ಕೂಡಿರುತ್ತದೆ. ಆರೋಗ್ಯವು ಉತ್ತಮ ಜೀವನದ ಗುಣ ಲಕ್ಷಣಗಳಲ್ಲಿ ಬಂದಾಗಿದೆ. ಅದು ದೀರ್ಘಕಾಲ ಬದುಕಿಗೆ ಸಹಾಯಮಾಡುತ್ತದೆ. ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆಗೆ ಅದ್ಯತೆ ಕೊಡಬೇಕು. ಉತ್ತಮ ಆಹಾರ, ಶುದ್ಧ ನೀರು, ಶುದ್ಧಗಾಳಿ, ಸ್ವಚ್ಛ ಪರಿಸರವನ್ನು ಕಾಪಾಡಿಕೊಳ್ಳುವುದರಿಂದ ರೋಗಗಳು ಹರಡುವುದನ್ನು ತಡೆಯಬಹುದು ಎಂದು ಹೇಳಿದರು, ಹಾಗಾಗಿ ಇಂದಿನ ಯುವಕ-ಯುವತಿಯರು ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಮೂಲಕ ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದರು.ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುವುದರ ಮೂಲಕ ಸೂಕ್ತ ಉತ್ತರ ಪಡೆದುಕೊಂಡರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಎಂ. ಮಹದೇವಸ್ವಾಮಿ ಮಾತನಾಡಿ, ಪ್ರಸ್ತುತದಲ್ಲಿ ನಾನಾರೋಗಗಳು ದೇಶದಲ್ಲಿ ಹರಡುತ್ತಾ ಬರುತ್ತಿದೆ. ಅದ್ದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಹಾಗೂ ಕುಟುಂಬದವರ ಆರೋಗ್ಯ ರಕ್ಷಣೆಗೆ ಕಾಳಜಿವಹಿಸುವಂತೆ ತಿಳಿಸಿದರು.ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಟಿ. ರಮೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಖುಷಿನಾರಾಯಣ್ ದಾಸ್ ನಿರೂಪಿಸಿದರು.