ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಶ್ರೀ ಎಚ್.ಎ.ಇಕ್ಬಾಲ್ ಹುಸೇನ್ ಅಭಿಮಾನಿ ಬಳಗದ ವತಿಯಿಂದ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರ ಹುಟ್ಟು ಹಬ್ಬದ ಅಂಗವಾಗಿ ಶನಿವಾರ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ಜೊತೆಗೆ ದೇಗುಲ, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನಗರದ ಶಾಂತಿನಿಕೇತನ ಶಾಲಾ ಆವರಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ತಪಾಸಣೆಗೊಳಗಾದರು. ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಸ್ಥಳದಲ್ಲಿಯೇ ಔಷಧಿ ವಿತರಿಸಿದರು.
ನೂರಾರು ಜನರು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. ಜನರನ್ನು ಶಿಬಿರಕ್ಕೆ ಕರೆತರಲು ಮತ್ತು ವಾಪಸ್ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. ಇಕ್ಬಾಲ್ ಹುಸೇನ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಿ ಅಭಿಮಾನ ಮೆರೆದರು.ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶ್ರೀ ಆಂಜನೇಯಸ್ವಾಮಿ, ಗಣಪತಿ ಮತ್ತು ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಆನಂತರ ಪೀರನ್ ಷಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ರಾಮನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಾಕಾರ ಮಾಡಿರುವ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಅವರ ಜನಪರ ಕಾರ್ಯಗಳು ಜನರ ಮನಸ್ಸಿನಲ್ಲಿವೆ. ಮತ್ತಷ್ಟು ಅಭಿವೃದ್ದಿ ಕೆಲಸ ಕಾರ್ಯಗಳು ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿವಿಧ ಆಸ್ಪತ್ರೆಗಳ 14 ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಪಾಸಣೆ ನಡೆಸುತ್ತಿದ್ದಾರೆ. ಗ್ರಾಮಾಂತರ, ನಗರದ ಜನತೆ ಶಿಬಿರದ ಸದುಪಯೋಗ ಪಡೆಯುತ್ತಿದ್ದಾರೆ. ಶಾಸಕರ ಹುಟ್ಟುಹಬ್ಬದ ಅಂಗವಾಗಿ ಪೌರಾಣಿಕ ನಾಟಕ ಪ್ರದರ್ಶನ, ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳ ಮೂಲಕ ಜನ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳು ಮತ್ತು ಅಭಿಮಾನಿಗಳ ಆಶಯದಂತೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಿ, ಔಷಧಿಗಳ ವಿತರಣೆ ಹಾಗೂ ರಕ್ತದಾನ ಮಾಡುವ ಮೂಲಕ ಇಕ್ಬಾಲ್ ಹುಸೇನ್ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸುತ್ತಿರುವ ತೃಪ್ತಿಯಿದೆ ಎಂದು ಚೇತನ್ ಕುಮಾರ್ ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಮಾತನಾಡಿ, ಸಾರ್ವಜನಿಕರಿಗೆ ಉಪಯುಕ್ತವಾದ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ ಯಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಸೇರಿ ಮಾಡಿರುವ ಚಿಂತನೆ ಅರ್ಥ ಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡ ಜನರು ದುಬಾರಿ ಖರ್ಚು ಮಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಿದೆ. ಕೆಲವರು ರೋಗ ಇದ್ದರು ಹೇಳಿಕೊಳ್ಳಲಾಗದೆ ಮುಜುಗರ ಪಡುತ್ತಾರೆ. ಇಂತಹ ಶಿಬಿರಗಳು ಬಡಜನರಿಗೆ ಅನುಕೂಲವಾಗಲಿದೆ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಶಾಸಕರು ಕ್ಷೇತ್ರದ ಜನರಿಗೆ ಪ್ರೀತಿಯನ್ನು ಹಂಚುವ ಕೆಲಸ ಮಾಡಲಿ ಎಂದರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್ ಮಾತನಾಡಿ, ಶಾಸಕರು ಸಮಾಜಸೇವೆ ಮಾಡಿಕೊಂಡು ರಾಜಕಾರಣಕ್ಕೆ ಬಂದವರು. ಜನರ ಕಷ್ಟಸುಖಗಳೊಂದಿಗೆ ಜನರ ಧ್ವನಿಯಾದವರು. ಅವರು ಕ್ಷೇತ್ರದ ಜನರ ಮೇಲಿನ ಕಳಕಳಿ ಇಂದು ಕ್ಷೇತ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಹಾಗಾಗಿ ಇನ್ನಷ್ಟು ಕೆಲಸಗಳನ್ನು ಮಾಡುವ ಶಕ್ತಿ ಅವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸೇವಾದಳದ ಜಿಲ್ಲಾಧ್ಯಕ್ಷ ಚಂದ್ರಮೋಹನ್, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಬೈರೇಗೌಡ, ಗಿರಿಜಮ್ಮ, ನಾಗಮ್ಮ, ನಿಜಾಂ ಷರೀಫ್, ಗ್ರಾಪಂ ಮಾಜಿ ಅಧ್ಯಕ್ಷರಾದ ರಂಜಿತ್, ಲೋಕೇಶ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಕೆಡಿಪಿ ಸದಸ್ಯ ಮುಕುಂದ, ಮುಖಂಡರಾದ ಶೋಭಾ, ರವಿ, ರೈಡ್‌ನಾಗರಾಜು, ಪಾದ್ರಳ್ಳಿಮಹದೇವ, ಕಾರ್ತಿಕ್, ವಸಂತ, ಸಂತೋಷ, ರಾಮು, ಮಲ್ಲೇಗೌಡ, ಪಾರ್ಥ, ಉಮೇಶ್, ಕೆಂಪರಾಮು, ಆಂಜನಪ್ಪ ಇತರರಿದ್ದರು.