ಸಾರಾಂಶ
ಜಿಲ್ಲಾ ಮಟ್ಟದ ಬೃಹತ್ ಆರೋಗ್ಯ ತಪಾಸಣಾ ಶಿಬಿರ । ರಾಜ್ಯದ ವಿವಿಧ ಜಿಲ್ಲೆಗಳಿಂದ ತಜ್ಞ ವೈದ್ಯರು ಭಾಗಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಪಟ್ಟಣದಲ್ಲಿ ಇದೇ ಮೊದಲ ಬಾರಿ ಸರ್ಕಾರದ ವತಿಯಿಂದ ಜ.29ರಂದು ಅಯೋಜಿಸಲು ಉದ್ದೇಶಿಸಲಾಗಿರುವ ಜಿಲ್ಲಾ ಮಟ್ಟದ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ, ಶಿಬಿರಕ್ಕೆ ಸಂಬಂಧಿಸಿದ ಜಿಲ್ಲಾ ಹಂತದ ಹಾಗೂ ತಾಲೂಕು ಹಂತದ ಅಧಿಕಾರಿಗಳ ಜೊತೆ ಚರ್ಚಿಸಿ ಶಿಬಿರ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರಲ್ಲದೆ ಅಂದಿನ ಶಿಬಿರದಲ್ಲಿ ಯಾವುದೇ ಲೋಪ ಆಗದಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ಶಿಬಿರವು ಕೊಳ್ಳೇಗಾಲ ಎಂಜಿಎಸ್ವಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ಹಾಜರಿರುವ ರೋಗಿಗಳ ತಪಾಸಣೆ ಮುಗಿಯವರೆವರಿಗೂ ನಡೆಯಲಿದ್ದು, ಶಿಬಿರದಲ್ಲಿ 120 ಕ್ಕೂ ಹೆಚ್ಚು ತಜ್ಞ ವೈದ್ಯರು ಉಪಸ್ಥಿತರಿದ್ದು ಎಲ್ಲಾ ರೀತಿಯ ಕಾಯಿಲೆಗಳ ತಪಾಸಣೆಯ ಮೆಗಾ ಶಿಬಿರ ಅಗಿರಲಿದೆ ಎಂದರು.ಡಿಹೆಚ್ಒ ಚಿದಂಬರ ಮಾತನಾಡಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಈಗಾಗಲೇ ನೋಂದಣಿ ಮಾಡಿಕೊಳ್ಳುತ್ತಿದ್ದು ಅವರುಗಳನ್ನು ಕರೆದು ತರಲು ಆ್ಯಂಬುಲೆನ್ಸ್ ಹಾಗೂ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಕಾರ್ಡ್ ಹೊಂದಿದವರಿಗೆ ಉಚಿತ ಐದು ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ ದೊರಕಲಿದೆ ಎಂದರು. ಬಿಪಿಎಲ್ ಕಾರ್ಡ್ ಇರುವರಿಗೆ ಎರಡೂವರೆ ಲಕ್ಷದವರೆಗೂ ವೈದ್ಯಕೀಯ ಸೌಲಭ್ಯ ದೊರಕಲಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಲ್ಲಾ ಕಾಯಿಲೆಗಳಿಗೆ ಉಚಿತ ಔಷಧಿ ಸೌಲಭ್ಯಗಳು ಕೊಡುವ ವ್ಯವಸ್ಥೆ ಇದೆ. ಈ ಶಿಬಿರದಲ್ಲಿ ರಾಜ್ಯ ರಾಜಧಾನಿ ಹಾಗೂ ವಿವಿಧ ಜಿಲ್ಲೆಗಳಿಂದ ವಿವಿಧ ಕಾಯಿಲೆಗಳ ತಜ್ಞ ವೈದ್ಯರುಗಳು ಲಭ್ಯ ಇರುವುದರಿಂದ ಜಿಲ್ಲೆಯ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ತಾಪಂ ಇಒ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಡಾ. ರಾಜಶೇಖರ್, ನಗರಸಭೆ ಪೌರಾಯುಕ್ತ ರಮೇಶ್, ಪ್ರಾಂಶುಪಾಲ ಪ್ರಮೋದ್, ಉಪ ಪ್ರಾಂಶುಪಾಲೆ ಚಂದ್ರಮ್ಮ ಇನ್ನಿತರಿದ್ದರು.