ಆರೋಗ್ಯ- ಆಯುರ್ವೇದಕ್ಕೆ ನಿಕಟ ಸಂಬಂಧ: ರಾಘವೇಶ್ವರ ಶ್ರೀ

| Published : Aug 26 2024, 01:37 AM IST

ಸಾರಾಂಶ

ಜೀವನಕ್ಕೆ ಯೋಗಚಿಂತನೆ ಹಾಗೂ ರೋಗಚಿಂತನೆ ಎರಡರ ಅಗತ್ಯವೂ ಇದೆ. ಜೀವನದಲ್ಲಿ ಯೋಗ ಸಿದ್ಧಿಸಬೇಕಾದರೆ ರೋಗ ಅಡ್ಡ ಬರಬಾರದು.

ಗೋಕರ್ಣ: ಜ್ಯೋತಿಷ ಮತ್ತು ಆಯುರ್ವೇದಕ್ಕೆ ನಿಕಟ ಸಂಬಂಧವಿದೆ. ಜ್ಯೋತಿಷದ ಮೂಲಕ ಆ ವ್ಯಕ್ತಿಯ ಸಂಪೂರ್ಣ ಆರೋಗ್ಯ ಮತ್ತು ಅನಾರೋಗ್ಯ ಸ್ಥಿತಿಯನ್ನು ಅರಿತುಕೊಳ್ಳಬಹುದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 36ನೇ ದಿನವಾದ ಭಾನುವಾರ ''''ಕಾಲ'''' ಸರಣಿಯಲ್ಲಿ ಪ್ರವಚನ ನೀಡಿ, ಜೀವನಕ್ಕೆ ಯೋಗಚಿಂತನೆ ಹಾಗೂ ರೋಗಚಿಂತನೆ ಎರಡರ ಅಗತ್ಯವೂ ಇದೆ. ಜೀವನದಲ್ಲಿ ಯೋಗ ಸಿದ್ಧಿಸಬೇಕಾದರೆ ರೋಗ ಅಡ್ಡ ಬರಬಾರದು. ಆದ್ದರಿಂದ ಜ್ಯೋತಿಷ್ಯದಲ್ಲಿ ರೋಗಚಿಂತನ ಅತ್ಯಂತ ಮಹತ್ವ ಪಡೆದಿದೆ. ಗ್ರಹಗತಿಯ ವಿಶ್ಲೇಷಣೆಯಿಂದ ನಮ್ಮ ಆರೋಗ್ಯ ಸ್ಥಿತಿ ತಿಳಿಯುತ್ತದೆ. ಜಾತಕದ ವಿಶ್ಲೇಷಣೆಯಿಂದ ಬರಬಹುದಾದ ರೋಗಗಳನ್ನು ತಿಳಿದುಕೊಂಡು ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಅಭಿಪ್ರಾಯಟ್ಟರು.ಜಾತಕದಲ್ಲಿ ನವಾಂಶ ಎನ್ನುವುದು ಆ ವ್ಯಕ್ತಿಯ ಸೂಕ್ಷ್ಮತೆಯನ್ನು ಅರಿತುಕೊಳ್ಳಲು ಸಹಕರಿಸುತ್ತದೆ. ಕೆಲವೊಮ್ಮೆ ಮೇಲ್ನೋಟಕ್ಕೆ ದುರ್ಬಲ ಎಂದು ಕಂಡುಬಂದರೂ ಒಳಹೊಕ್ಕು ನೋಡಿದರೆ ಆ ಗ್ರಹ ಬಲಿಷ್ಠವಿರಬಹುದು. ಹೀಗೆ ಜ್ಯೋತಿಷ್ಯದಲ್ಲಿ ಸೂಕ್ಷ್ಮ ಹಾಗೂ ಸ್ಥೂಲ ಚಿಂತನೆಗಳು ಅಗತ್ಯ ಎಂದು ವಿಶ್ಲೇಷಿಸಿದರು.ಜ್ಯೋತಿಷ್ಯದ ದೃಷ್ಟಿಯಿಂದ ಎರಡು ಬಗೆಯ ರೋಗಗಳಿವೆ. ಒಂದು ನಿಜ ಹಾಗೂ ಇನ್ನೊಂದು ಆಗಂತುಕ ರೋಗ. ಸಹಜವಾಗಿ ನಮ್ಮೊಳಗೆ ಹುಟ್ಟುವ ರೋಗಗಳು ನಿಜರೋಗಗಳಾದರೆ, ಹೊರಗಿನಿಂದ ಬರುವ ರೋಗಗಳು ಎರಡನೇ ವರ್ಗದಲ್ಲಿ ಸೇರುತ್ತವೆ. ಸಾಂಕ್ರಾಮಿಕ ರೋಗ, ಚರ್ಮರೋಗ ಇದರಲ್ಲಿ ಸೇರುತ್ತವೆ ಎಂದರು.

ನಿಜ ರೋಗದಲ್ಲಿ ಒಂದು ಶರೀರಕ್ಕೆ ಸಂಬಂಧಿಸಿದ್ದು, ಇನ್ನೊಂದು ಮನಸ್ಸಿಗೆ ಸಂಬಂಧಿಸಿದ್ದು ಹೀಗೆ ಎರಡು ವಿಧಗಳಿವೆ. ಆಗಂತುಕ ರೋಗಗಳಲ್ಲಿ ದೃಷ್ಟನಿಮಿತ್ತಜ ಮತ್ತು ಅದೃಷ್ಟನಿಮಿತ್ತಜ ಹೀಗೆ ಕಾರಣ ಕಾಣುವ ಹಾಗೂ ಕಾಣದ ಎರಡು ವರ್ಗಗಳಿವೆ. ಶೋಕ, ಗಾಬರಿ ಕೋಪ, ಒತ್ತಡ, ಕ್ರೋಧ ಮನಸ್ಸಿನಲ್ಲಿ ಪದೇ ಪದೇ ಉದ್ಭವಿಸಿದಾಗ ಮಾನಸಿಕ ರೋಗಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರ ಜಾತಕದ ಲಗ್ನ ನಮ್ಮ ಅರೋಗ್ಯವನ್ನು ತಿಳಿಸಿದರೆ, ಅನಾರೋಗ್ಯವನ್ನು ಆರನೇ ಹಾಗೂ ಎಂಟನೇ ರಾಶಿಯಿಂದ ನೋಡಬಹುದು ಎಂದರು.ಯಲ್ಲಾಪುರ ತಹಸೀಲ್ದಾರ್ ಅಶೋಕ್ ಭಟ್ ಶ್ರೀಗಳಿಂದ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕಾರ್ಯದರ್ಶಿ ಜಿ.ಕೆ. ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.