ಬೆಂಗಳೂರು ಉತ್ತರ ತಾಲೂಕು ಹುತ್ತನಹಳ್ಳಿ ಬಳಿ ₹150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಾಣದ ಬದಲು ಯಲಹಂಕ ತಾಲೂಕು ಬೆಳ್ಳಹಳ್ಳಿ ಹಾಗೂ ಹೆಬ್ಬಾಳ ಕ್ಷೇತ್ರದ ಸಂಜಯನಗರ ಬಳಿ ತಲಾ ₹75 ಕೋಟಿ ವೆಚ್ಚದಲ್ಲಿ ತಲಾ 125 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಉತ್ತರ ತಾಲೂಕು ಹುತ್ತನಹಳ್ಳಿ ಬಳಿ ₹150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಾಣದ ಬದಲು ಯಲಹಂಕ ತಾಲೂಕು ಬೆಳ್ಳಹಳ್ಳಿ ಹಾಗೂ ಹೆಬ್ಬಾಳ ಕ್ಷೇತ್ರದ ಸಂಜಯನಗರ ಬಳಿ ತಲಾ ₹75 ಕೋಟಿ ವೆಚ್ಚದಲ್ಲಿ ತಲಾ 125 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.ಉತ್ತರ ತಾಲೂಕಿನ ಜಾಲ ಹೋಬಳಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂ.72ರಲ್ಲಿ 7 ಎಕರೆ ಸರ್ಕಾರಿ ಜಮೀನನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಯ್ದಿರಿಸಿ ₹150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಜಾಗಕ್ಕೆ ಸೂಕ್ತ ಸಾರಿಗೆ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಯಲಹಂಕ ಹೋಬಳಿಯ ಬೆಳ್ಳಹಳ್ಳಿಯ 5 ಎಕರೆ ಜಾಗದಲ್ಲಿ ಹಾಗೂ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿರುವ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದ ಭೂಪಸಂದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 4 ಎಕರೆ ಜಾಗದಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆದೇಶದಲ್ಲಿ ತಿಳಿಸಿದೆ.
