ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆರೋಗ್ಯ ಸಚಿವರು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ರಾಜೀನಾಮೆ ಕೇಳಿರುವುದರ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸಿ, ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದ್ದಾರೆ.ಕರ್ನಾಟಕ ರಾಜ್ಯದಲ್ಲಿ 30 ಸಾವಿರ ಮಂದಿ ಸ್ಟಾಫ್ ನರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಆದರೆ ಇಂದು ಅವರ ಬದುಕು ಕಸಿಯುವ ಕೆಲಸವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಪ್ರಣಾಳಿಕೆ ಯಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಕಾಯಂಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಆಯೋಗ್ಯ ಸಚಿವರು ಈಗ ರಾಜೀನಾಮೆ ಕೇಳಿರುವುದು ಅಕ್ಷಮ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಚಿವ ದಿನೇಶ್ ಗುಂಡೂರಾವ್ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರು ರಾಜೀನಾಮೆ ನೀಡಿದ ನಂತರ ಮರು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಈ ರೀತಿ ಮಾಡಿದಾಗ ನೌಕರರಿಗೆ ಬಹಳಷ್ಟು ಅನ್ಯಾಯವಾಗುತ್ತದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 10 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದರೆ, ಅವರನ್ನು ಕಾಯಂಗೊಳಿಸಬೇಕು ಎಂದರು.ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಕಡಿಮೆ ಸಂಬಳಕ್ಕೆ ನೀಡಲಾಗುತ್ತಿದೆ. ಮಾನವೀಯತೆ ತೋರಬೇಕಿದೆ. ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ. ಆರೋಗ್ಯ ಸಚಿವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಬೇಕು ಎಂದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ನೌಕರರಿಗೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಚಾರಿ ವರದಿಯಂತೆ ಶೇ. 1 5ರಷ್ಟು ವೇತನ ಹೆಚ್ಚಳದ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಶೇ. 30ರಷ್ಟು ಹೆಚ್ಚಳ ಮಾಡಿ ಪ್ರತಿ ವರ್ಷ ನೀಡಬೇಕಿದೆ. ಹಾಗೇ ವರದಿಯಲ್ಲಿನ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಯೋಗೇಶ್ ಉಪ್ಪಾರ್, ಎಚ್.ಎಸ್. ಪ್ರಕಾಶ್, ರವಿನಂದನ್, ರಾಜೇಶ್ ಮೊದಲಾದವರು ಇದ್ದರು.
31ಕ್ಕೆ ಮೈಸೆಮ್ ಕಾಲೇಜಿನಿಂದ ಬೃಹತ್ ಉದ್ಯೋಗ ಮೇಳಮೈಸೂರು: ನಗರದ ಮೈಸೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಮೇ 31ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಟಿ. ನರಸೀಪುರ ರಸ್ತೆಯ ಕಾಲೇಜು ಆವರಣದಲ್ಲಿ ಬಿಎ, ಬಿಕಾಂ, ಬಿಸಿಎ, ಬಿಬಿಎ, ಬಿಎಸ್ಸಿ, ಎಂಬಿಎ, ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಇ, ಬಿಟೆಕ್, ಡಿಪ್ಲೊಮಾ, ಐಟಿಐ ವ್ಯಾಸಂಗ ಮಾಡಿದವರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಲೀಡ್‌ಟ್ರೈನಿಂಗ್ ಮತ್ತು ಕಾರ್ಪೊರೇಟ್ ಸಲ್ಯೂಷನ್ಸ್ ನ ಸಿಇಒ ಎಂ.ಆರ್. ವಿದ್ಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, 1000ಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ. ಈ ಮೇಳವನ್ನು ಶಾಸಕ ಟಿ.ಎಸ್. ಶ್ರೀವತ್ಸ ಉದ್ಘಾಟಿಸುವುದಾಗಿ ಅವರು ತಿಳಿಸಿದರು.ಈ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಪ್ರವೇಶ ಉಚಿತವಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಮೊ. 89517 45556, 96069 90745 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಎಂ.ಎಸ್. ಪ್ರಭುಸ್ವಾಮಿ, ಉದ್ಯೋಗಾಧಿಕಾರಿ ಎಲ್. ಪ್ರಭುಸ್ವಾಮಿ, ಅಶ್ವಿನಿ, ಮಹದೇಶ್ ಇದ್ದರು.