ಜಿಲ್ಲೆಯ ಆರೋಗ್ಯ ಇಲಾಖೆಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಗ್ರೂಪ್-ಡಿ ನೌಕರರಿಗೆ ಬಾಕಿ ಇರುವ ವೇತನವನ್ನು ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿ ಮತ್ತು ಡಿ ವೃಂದದ ಹೊರಗುತ್ತಿಗೆ ನೌಕರರ ಸಂಘ (ಟಿಯುಸಿಐ) ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೇರಿದ ಸಂಘದ ಪದಾಧಿಕಾರಿಗಳು,ಸದಸ್ಯರು, ನೌಕರರು, ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಘೊಷಣೆಗಳನ್ನು ಕೂಗಿದರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ವರ್ಷದ ಗುತ್ತಿಗೆ ಪಡೆದ ಮೆ॥ ಪಾಪುಲರ್ ಎಂಜಿನಿಯರಿಂಗ್ ಏಜನ್ಸಿ ಬಳ್ಳಾರಿಯವರು ಗುತ್ತಿಗೆ ಒಪ್ಪಂದವನ್ನು ಪಾಲಿಸಿಲ್ಲ. ವೇತನ ಪಾವತಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು 7 ನೇ ತಾರೀಖಿನೊಳಗಾಗಿ ಕಾರ್ಮಿಕರಿಗೆ ವೇತನ ಪಾವತಿ ಮಾಡುತ್ತಿಲ್ಲ. ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಕಿ ವೇತನ ಸಂಪೂರ್ಣ ಪಾವತಿ ಮಾಡಬೇಕು, ತಡೆಹಿಡಿದ ಪರಿಷ್ಕೃತ ವೇತನ ಕೂಡಲೇ ಜಾರಿಗೊಳಿಸಬೇಕು, ದಶಕಗಳಿಂದ ದುಡಿಯುತ್ತಿರುವ ನೌಕರರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬೇಕು, ಕಾಯಂ ನೇಮಕಾತಿಯ ನೆಪದಲ್ಲಿ ನೌಕರರನ್ನು ವಜಾಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಲ್ಲಾ ನೌಕರರಿಗೆ ಪಿಎಫ್ಐ, ಇಎಸ್ಐ ಜಾರಿಮಾಡಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ, ರಾಜ್ಯ ಕಾರ್ಯದರ್ಶಿ ಎಂ ಗಂಗಾಧರ, ಜಿಲ್ಲಾಧ್ಯಕ್ಷ ಜಿ ಅಡವಿರಾವ, ಎಂ.ನಿರಂಜನ್ ಕುಮಾರ, ಮಣಿ, ನಿಸರ್ಗ, ನರಸಪ್ಪ ರಾಯಚೂರು ಶಂಕ್ರಪ್ಪ ಗುಂಡಸಾಗರ್, ಉಪಾಧ್ಯಕ್ಷರು ಆಂಜನೇಯ ಅರಕೇರಿ, ದ್ಯಾಮಣ್ಣ ನಾಗರಾಳ, ಮಲ್ಲಿಕಾರ್ಜನ, ಜಗದೀಶ, ಶರಣಬಸವ ದೇವರಾಜ, ನಾಗಯ್ಯ ಚಿಕ್ಕಮಠ, ಫರಿಜನಾ ಬೇಗಂ, ಚೈತ್ರ, ಗೌರಮ್ಮ, ಎಂ. ಗುಂಡಮ್ಮ, ಯಲ್ಲಪ್ಪ ಆನ್ವರಿ, ವೆಂಕಟೇಶ ಸೇರಿ ಅನೇಕರು ಭಾಗವಹಿಸಿದ್ದರು.

---------------------

14ಕೆಪಿಆರ್‌ಸಿಆರ್‌ 03: ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿ ಮತ್ತು ಡಿ ವೃಂದದ ಹೊರಗುತ್ತಿಗೆ ನೌಕರರ ಸಂಘ (ಟಿಯುಸಿಐ) ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.