ಸಾರಾಂಶ
ಯಲಬುರ್ಗಾ:
ತಾಲೂಕಿನಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಕಂಡು ಬಂದಿದ್ದು, ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು.ಪಟ್ಟಣದ ಕಂದಾಯ ಭವನದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಕುರಿತು ಭಾಗೀದಾರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಜಾಗೃತಿ, ಸಮಾಲೋಚನೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರೆಗೆ ತಾಲೂಕಿನಲ್ಲಿ ೩೧ ಬಾಲ ಗರ್ಭಿಣಿಯರ ಪ್ರಕರಣ ಕಂಡು ಬಂದಿರುವ ಕುರಿತು ಮಾಹಿತಿ ಇದೆ. ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಟಿಎಚ್‌ಒ ನೇತ್ರಾವತಿ ಹಿರೇಮಠ ಅವರಿಗೆ ಸೂಚಿಸಿದರು.ಗ್ರಾಪಂ ವ್ಯಾಪ್ತಿಯಲ್ಲಿ ಅರಿವು ಕೇಂದ್ರಗಳ ನಿರ್ವಹಣೆ ಹೇಗಿದೆ? ಎಂದು ತಾಪಂ ಇಒ ಸಂತೋಷ ಪಾಟೀಲ್ ಅವರನ್ನು ಶೇಖರಗೌಡ ರಾಮತ್ನಾಳ ಪ್ರಶ್ನಿಸಿದರು. ತಾಪಂ ಇಒ ಪ್ರತಿಕ್ರಿಯಿಸಿ, ಗ್ರಾಪಂ ಅರಿವು ಕೇಂದ್ರಗಳು ಸರಿಯಾಗಿ ನಡೆಯುತ್ತಿವೆ. ಮಕ್ಕಳಿಗೆ ಸ್ಪರ್ಧಾತ್ಮಕವಾಗಿ ಅನುಕೂಲವಾಗುವ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ನಡೆಸುವ ಯೋಜನೆ ಇದೆ ಎಂದು ಉತ್ತರಿಸಿದರು.
ಗ್ರಾಪಂ ಕೇಂದ್ರ ಸ್ಥಾನದಲ್ಲಿ ಕೂಸಿನಮನೆ ನಿರ್ವಹಣೆಗೆ ಕೇರ್ ಟೇಕರ್ ನೇಮಿಸಿ ತರಬೇತಿ ನೀಡಲಾಗಿದೆ. ಅದರ ನಿರ್ವಹಣೆ ಕೂಡ ಗ್ರಾಪಂ ಮಾಡುತ್ತಿದೆ. ಕೂಸಿನ ಮನೆಗಳಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕೂಡ ಭೇಟಿ ನೀಡಬೇಕು ಎಂದು ತಾಪಂ ಇಒ ಸಭೆಯಲ್ಲಿ ತಿಳಿಸಿದರು.ಗ್ರಾಪಂನಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶೇ.೨೫ ರಷ್ಟು ಅನುದಾನ ಅರ್ಹ ಅಭ್ಯರ್ಥಿಗಳಿಗೆ ಸಮರ್ಪಕವಾಗಿ ತಲುಪುವಂತೆ ಬಳಸಬೇಕು ಎಂದು ಶೇಖರಗೌಡ ರಾಮತ್ನಾಳ ತಾಪಂ ಇಒಗೆ ನಿರ್ದೇಶಿಸಿದರು.
ಅಂಗನವಾಡಿ, ಶಾಲೆ ಹಾಗೂ ಕಾಲೇಜು ಕಟ್ಟಡಗಳ ಮೇಲೆ ಅಪಾಯ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ತೆರವುಗೊಳಿಸಬೇಕು. ಅನಾಹುತ ಸಂಭವಿಸಿದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬೀಜೋತ್ಪಾದನೆ ಕಂಪನಿಗಳು ರೈತರ ಮೂಲಕ ವಿವಿಧ ಬೆಳೆಗಳ ಬೀಜೋತ್ಪಾದನಾ ಕೃಷಿ ನಡೆಸಲು ಮುಂದಾಗಿದ್ದು, ಕೃಷಿ ಚಟುವಟಿಕೆಗೆ ಬಾಲ ಕಾರ್ಮಿಕರನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಬೇಕು ಎಂದು ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಡಿ. ನಿವೇದಿತಾಗೆ ಸೂಚಿಸಿದರು.
ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕೆಲ ವಿದ್ಯಾರ್ಥಿಗಳು ಅನಾರೋಗ್ಯ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಇರುತ್ತದೆ. ಅಂಥ ವಿದ್ಯಾರ್ಥಿಗಳ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ವಸಹಿಬೇಕು ಎಂದರು. ಸಭೆಗೂ ಮುಂಚೆ ಶೇಖರಗೌಡ ರಾಮತ್ನಾಳ, ಬೇವೂರಿನ ವಸತಿ ನಿಲಯ, ಗ್ರಾಪಂ, ಪೊಲೀಸ್ ಠಾಣೆ, ಶಾಲೆ, ಪಿಯು ಕಾಲೇಜು, ಅಂಗನವಾಡಿ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಶಿರಸ್ತೇದಾರರಾದ ವಿರೂಪಣ್ಣ ಹೊರಪೇಟಿ, ಮುರಳೀಧರ, ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಪೂಜಾರ, ಶಿವಲೀಲಾ ಹೊನ್ನೂರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಪಂ ಮುಖ್ಯಾಧಿಕಾರಿ ನಾಗೇಶ, ಸಿಡಿಪಿಒ ಬೆಟ್ಟದೇಶ ಮಾಳೆಕೊಪ್ಪ, ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಶಂಕರ ಕರಡಕಲ್, ಶಶಿಧರ ಸಕ್ರಿ, ಮಹ್ಮದ್ ಖಲೀಮುದ್ದಿನ್, ಲಿಂಗನಗೌಡ ಪಾಟೀಲ್, ಪ್ರಮೋದ ತುಂಬಳ ಸೇರಿದಂತೆ ಇತರರು ಇದ್ದರು.