ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆಗಳ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ವೀಕರಿಸಿದರು.ಸಂಘದ ಗೌರವ ಅಧ್ಯಕ್ಷ ಡಾ. ಪ್ರಮೋದ್ ಮಾತನಾಡಿ, ಜನಸಂಖ್ಯೆ ಮಿತಿ ಹೆಚ್ಚಿಸಿ, ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ತೀರ್ಮಾನವನ್ನು ಆರೋಗ್ಯ ಇಲಾಖೆ ಕೈ ಬಿಟ್ಟಿರುವುದು, ಹೋರಾಟಕ್ಕೆ ಸಂದ ಜಯವಾಗಿದೆ. ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗರಿಷ್ಠ ಒಂದು ಸಾವಿರ ಜನಸಂಖ್ಯೆಗೆ, ನಗರದಲ್ಲಿ ಗರಿಷ್ಠ 2000 ಜನಸಂಖ್ಯೆಗೆ ಒಬ್ಬ ಆಶಾ ಕೆಲಸ ಮಾಡಬೇಕೆಂಬ ಹಳೆಯ ಮಾರ್ಗ ಸೂಚಿಗೆ ಬದ್ಧವಾಗಿರುವುದು ಸ್ವಾಗತಾರ್ಹವಾಗಿದೆ. ಇನ್ನು ಎರಡನೆಯದಾಗಿ ಮೌಲ್ಯಮಾಪನದ ಕ್ರಮವೂ ಆಶಾ ಕಾರ್ಯದಕ್ಷತೆ ಹೆಚ್ಚಿಸಲು ಮಾತ್ರ ಮಾಡಿದ್ದು ಕೆಲಸದಿಂದ ವಜಾಗೊಳಿಸಲಾಗುವುದು ಎಂಬ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಿಕರಣ ನೀಡಲಾಗಿದೆ. ಇದು ಕೂಡ ಹೋರಾಟಕ್ಕೆ ಸಂದ ಜಯವಾಗಿದೆ. ಇದಕ್ಕೆ ತಕ್ಕಂತೆ ಇಲಾಖೆ ನಡೆದುಕೊಳ್ಳುವ ಬಗ್ಗೆ ಆಶಾ ಕಾರ್ಯಕರ್ತೆಯರು ಜಾಗರೂಕರಾಗಿರಬೇಕು ಎಂದು ಸಂಘವು ಕರೆ ನೀಡುತ್ತದೆ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷೆ ಗೀತಾ ಪಿ.ಎ. ಮಾತನಾಡಿ, ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಜಿಲ್ಲಾ ಕೇಂದ್ರಗಳಲ್ಲಿ ಮೂರು ದಿನ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಅತ್ಯಂತ ಅಭೂತಪೂರ್ವ ರೀತಿಯಲ್ಲಿ ಸಂಘಟಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ನಿರಂತರ ಸುರಿಯುವ ಮಳೆಯಲ್ಲಿ ಚಳಿಯಲ್ಲಿ ಪ್ರಕೃತಿ ಅನಾನುಕೂಲತೆಯ ನಡುವೆಯೂ ಆಶಾ ಕಾರ್ಯಕರ್ತೆಯರು ಅತ್ಯಂತ ದಿಟ್ಟವಾಗಿ ಈ ಹೋರಾಟವನ್ನು ಸಂಘಟಿಸಿರುವುದಕ್ಕೆ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಅಭಿನಂದಿಸುತ್ತದೆ ಎಂದರು.ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಕೆ.ಎಸ್. ಮಾತನಾಡಿ, ಕನಿಷ್ಠ 10,000 ಖಾತ್ರಿಪಡಿಸುವ, ಬಜೆಟ್ ಘೋಷಣೆಯ ಒಂದು ಸಾವಿರ ಜಾರಿಗೊಳಿಸುವ ಯಾವುದೇ ಆದೇಶಗಳು ಸ್ಪಷ್ಟವಾಗಿ ಬಂದಿಲ್ಲ. ಆದರೆ ಆರೋಗ್ಯ ಸಚಿವರು ಈಗಾಗಲೇ ₹10,000 ಸಿಗುತ್ತಿದೆ ಎಂದು ದಾರಿತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆ ಮುಂದಿನ ಉನ್ನತ ಹಂತದ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲು ಆಶಾ ಸಂಘದ ರಾಜ್ಯ ಸಮಿತಿಯು ತಕ್ಷಣ ಸಭೆ ಸೇರಿ ಮುಂದಿನ ಹಂತದ ಸುದೀರ್ಘ ಹೋರಾಟವನ್ನು ತೀರ್ಮಾನಿಸಲಿದೆ ಎಂದರು.
ಆಶಾ ಕಾರ್ಯಕರ್ತೆಯರು ಒಗ್ಗಟ್ಟು ಕಾಪಾಡಿಕೊಳ್ಳುವ ಉನ್ನತ ಹಂತದ ಹೋರಾಟ ಕಟ್ಟುವ ಪ್ರತಿಜ್ಞೆ ತೆಗೆದುಕೊಂಡರು.ಜಿಲ್ಲಾ ಮುಖಂಡರಾದ ಮಂಗಳಾ, ನೇತ್ರಾ, ರಾಧಮ್ಮ, ವೀರಮ್ಮ, ಚೆನ್ನಮ್ಮ, ಅನ್ನಪೂರ್ಣ ಮತ್ತಿತರರಿದ್ದರು.