ಕ್ಯಾನ್ಸರ್‌ನ್ನು ಪತ್ತೆಗೆ ಆರೋಗ್ಯ ಪರೀಕ್ಷೆ ಮುಖ್ಯ

| Published : Jan 21 2025, 12:33 AM IST

ಸಾರಾಂಶ

ದೇಹದೊಳಗಿನ ಕೋಶಗಳು ನಿಯಂತ್ರಣ ಕಳೆದು ಅವ್ಯವಸ್ಥಿತವಾಗಿ ವಿಸ್ತಾರಗೊಂಡು ಜೀವಕ್ಕೆ ಅಪಾಯವನ್ನುಂಟು ಮಾಡುವ ರೋಗವೇ ಕ್ಯಾನ್ಸರ್‌. ಕ್ಯಾನ್ಸರ್‌ನ್ನು ಪತ್ತೆ ಮಾಡಲು ನಿಯಮಿತ ಆರೋಗ್ಯ ಪರೀಕ್ಷೆಗಳನ್ನು ಮಾಡುವುದು ಅತ್ಯಂತ ಮುಖ್ಯ ಎಂದು ಮುಖ್ಯ ಅತಿಥಿ ಡಾ.ಎಂ ವಿಜಯ್‌ಕುಮಾರ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ದೇಹದೊಳಗಿನ ಕೋಶಗಳು ನಿಯಂತ್ರಣ ಕಳೆದು ಅವ್ಯವಸ್ಥಿತವಾಗಿ ವಿಸ್ತಾರಗೊಂಡು ಜೀವಕ್ಕೆ ಅಪಾಯವನ್ನುಂಟು ಮಾಡುವ ರೋಗವೇ ಕ್ಯಾನ್ಸರ್‌. ಕ್ಯಾನ್ಸರ್‌ನ್ನು ಪತ್ತೆ ಮಾಡಲು ನಿಯಮಿತ ಆರೋಗ್ಯ ಪರೀಕ್ಷೆಗಳನ್ನು ಮಾಡುವುದು ಅತ್ಯಂತ ಮುಖ್ಯ ಎಂದು ಮುಖ್ಯ ಅತಿಥಿ ಡಾ.ಎಂ ವಿಜಯ್‌ಕುಮಾರ್ ಸಲಹೆ ನೀಡಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿಯ ತುಂಬುಗಾನಹಳ್ಳಿ ೧೨ನೇ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಆರೋಗ್ಯವಾಗಿಬೇಕಾದರೆ ಆಹಾರ ನಿಯಮಿತ, ವ್ಯಾಯಾಮ ಮತ್ತು ಧೂಮಪಾನ ಅಥವಾ ಮದ್ಯಪಾನದಿಂದ ದೂರವಿದ್ದಾಗ ಮಾತ್ರ ಕ್ಯಾನ್ಸರ್ ಅಂತಹ ರೋಗಗಳನ್ನು ದೂರ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಫಾಸ್ಟ್ ಫುಡ್ ನಂತಹ ಅಪಾಯಕಾರಿ ಆಹಾರ ಸೇವೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.ದೇಹದಲ್ಲಿ ನಿಯಮಿತವಾಗಿ ಬದಲಾಗುತ್ತಿರುವ ವ್ಯತ್ಯಾಸಗಳು ಒತ್ತಡ, ಅಸಮರ್ಪಕ ತೂಕ ಇಳಿಕೆ ಅಥವಾ ಅಧಿಕ ತೂಕ, ಅಂಗಾಂಗ ನೋವು ದೀರ್ಘಕಾಲಿಕ ಹುಣ್ಣು ಇತ್ಯಾದಿ ಲಕ್ಷಣಗಳು ಗಮನಿಸಿ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಹಣ್ಣು, ತರಕಾರಿ ಉತ್ತಮ ಆಹಾರ ಸೇವನೆಯಿಂದ ದೇಹವನ್ನು ಸಮೃದ್ಧಗೊಳಿಸಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ವ್ಯಾಯಾಮ ಮತ್ತು ಶಾರೀರಿಕ ಚಟುವಟಿಕೆಗಳು ನಿಯಮಿತವಾಗಿ ಮಾಡುವುದರಿಂದ ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಅಪಾಯವನ್ನು ತಪ್ಪಿಸಬಹುದು ಎಂದು ಹೇಳಿದರು.

ಮುಖ್ಯ ಅತಿಥಿ ಡಾ.ನದೀಮುಲ್ ಹೊಡಾ ಮಾತನಾಡಿ, ಬಾಯಿ ಕ್ಯಾನ್ಸರ್ ಬಾಯಿಯಲ್ಲಿ ಸಂಭವಿಸುವ ಕ್ಯಾನ್ಸರ್ ಅನ್ನು ಸೂಚಿಸುತ್ತವೆ. ಇದು ತುಟಿಗಳು, ಒಸಡುಗಳು, ನಾಲಿಗೆ ಒಳ ಕೆನ್ನೆ, ಛಾವಣಿ ಮತ್ತು ಬಾಯಿಯ ನೆಲ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಬಾಯಿಯೊಳಗಿನ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್‌ನ್ನು ಒಟ್ಟಾರೆಯಾಗಿ ಬಾಯಿಯ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.ಅಂತಾರಾಷ್ಟ್ರೀಯ ಯೋಗ ಮಾರ್ಗದರ್ಶಕಿ ಡಾ.ಭಾಗೀರಥಿ ಕನ್ನಡತಿ ಮಾತನಾಡಿ, ಪ್ರತಿನಿತ್ಯ ಯೋಗ, ಪ್ರಾಣಯಾಮ, ಧ್ಯಾನ ಮಾಡುವುದು ಮತ್ತು ಆರೋಗ್ಯಕರ ಆಹಾರದಿಂದ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಸಸ್ಯೋಧ್ಯಾನದ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಹಾಗೂ ಕಮಾಂಡೆಂಟ್ ನೆರವೇರಿಸಿದರು. ಕಾಫ್‌ ಆಫ್ ದಿ ಮಂತ್‌ಗೆ ಆಯ್ಕೆಯಾದ ಸಿಬ್ಬಂದಿಗೆ ಗಣ್ಯರಿಂದ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಎಸಿಪಿ ಕೆ.ಎನ್ ನಾರಾಯಣಸ್ವಾಮಿ, ಸಹಾಯಕ ಕಮಾಂಡೆಂಟ್ ಡಾ.ನವೀನ್‌ಕುಮಾರ್ ಎಚ್.ವಿ, ಡೆಪ್ಯೂಟಿ ಕಮಾಂಡೆಂಟ್ ನಿಸಾರ್ ಅಹಮದ್, ಕಮಾಂಡೆಂಟ್ ಹಂಜಾ ಹುಸೇನ್ , ೬೦೦ಕ್ಕೂ ಹೆಚ್ಚಿನ ಕೆಎಸ್‌ಆರ್‌ಪಿ ಸಿಬ್ಬಂದಿಗಳು, ಏಕಲವ್ಯ ವಸತಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.