16 ರಂದು ಆರೋಗ್ಯ ಉಚಿತ ಶಿಬಿರ: ಮಹಾಂತೇಶ ಕವಟಗಿಮಠ

| Published : Jan 04 2024, 01:45 AM IST

16 ರಂದು ಆರೋಗ್ಯ ಉಚಿತ ಶಿಬಿರ: ಮಹಾಂತೇಶ ಕವಟಗಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರದಲ್ಲಿ 19 ವಿಭಾಗಗಳ ಚಿಕಿತ್ಸೆಗೆ ಉಚಿತ ತಪಾಸಣೆ ನಡೆಸಲಾಗುವುದು ಎಂದು ಮಹಾಂತೇಶ ಕವಟಗಿಮಠ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸಮಾಜದ ಜನರ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸುವ ಮೂಲಕ ಸವದತ್ತಿಯಲ್ಲಿ ಜ.16ರಂದು ಆರೋಗ್ಯ ಉಚಿತ ಶಿಬಿರವನ್ನು ಆಯೋಜಿಸಿ ಬಡಜನರಿಗೆ ಸೂಕ್ತ ಅನುಕೂಲತೆ ಕಲ್ಪಿಸಲಾಗುತ್ತಿದೆ ಎಂದು ವಿ.ಪ ಮಾಜಿ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ ಹೇಳಿದರು.

ಸ್ಥಳೀಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಜ.16ರಂದು ಮಹಾಂತೇಶ ಕವಟಗಿಮಠರವರ 58ನೇ ಹುಟ್ಟು ಹಬ್ಬದ ಅಂಗವಾಗಿ ನಡೆಯಲಿರುವ ಆರೋಗ್ಯ ಉಚಿತ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸವದತ್ತಿಯು ನನ್ನ ಜನ್ಮಭೂಮಿಯಾಗಿದ್ದು, ನನ್ನ 58ನೇ ಹುಟ್ಟು ಹಬ್ಬವನ್ನು ಗ್ರಾಮೀಣ ಭಾಗದ ಸವದತ್ತಿಯಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಜನರ ಸೇವೆಯನ್ನು ಮಾಡಲು ಇಚ್ಚಿಸಿರುವುದಾಗಿ ತಿಳಿಸಿದರು.

ನಾಡಿನ ಋಣ ತೀರಿಸುವ ನಿಟ್ಟಿನಲ್ಲಿ ಸವದತ್ತಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಆರೋಗ್ಯ ಉಚಿತ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಶಿಬಿರದಲ್ಲಿ 19 ವಿಭಾಗಗಳ ಚಿಕಿತ್ಸೆಗೆ ಉಚಿತ ತಪಾಸಣೆ ಮಾಡಲಾಗುತ್ತಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾಲಯ ಕೇಂದ್ರ ಹಾಗೂ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ನುರಿತ ತಜ್ಞ ವೈದ್ಯರಿಂದ ಅನೇಕ ರೋಗಗಳಿಗೆ ಉಚಿತ ತಪಾಸಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ತಪಾಸಣೆಗೆ ಬರುವಾಗ ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿಯನ್ನು ತಂದು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

ಜಗದೀಶ ಕೌಜಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವಸಭೆ ಪ್ರಾರಂಭಕ್ಕೂ ಮುಂಚೆ ಲಿಂ.ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ಜಗದೀಶ ಶಿಂತ್ರಿ, ಬಿ.ವಿ.ಮಲಗೌಡರ, ಡಾ.ಎನ್.ಸಿಬೆಂಡಿಗೇರಿ, ಈರಣ್ಣ ಚಂದರಗಿ, ವರ್ಷಾ ಗಾಂವಕರ, ಮಾರುತಿ ಡೊಂಬರ, ಜಗದೀಶ ಹನಸಿ, ಶಿವಾನಂದ ಹೂಗಾರ, ಪ್ರಕಾಶ ನರಿ, ಗುರಪ್ಪ ಚಿಕ್ಕುಂಬಿ, ಡಾ.ನಯನಾ ಬಸ್ಮೆ ಇತರರು ಉಪಸ್ಥಿತರಿದ್ದರು. ಈರಣ್ಣ ಚಂದರಗಿ ಸ್ವಾಗತಿಸಿದರು. ಡಿ.ಎಸ್.ಡಿಗ್ಗಿಮಠ ನಿರೂಪಿಸಿದರು.