ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ಕಲ್ಪಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಪರಿಶೀಲನೆಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.ಸೋಮವಾರದಿಂದ ಆರಂಭವಾದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ಸೌಧದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರು ಲಿಖಿತ ಉತ್ತರ ನೀಡಿದರು.
ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡುವ ನಿಟ್ಟಿನಲ್ಲಿ (ಅತಿಥಿ ಉಪನ್ಯಾಸಕರ ವಂತಿಗೆ ಮಾಸಿಕ 400 ರು. ಹಾಗೂ ಸರ್ಕಾರದಿಂದ 400 ರು. ಸೇರಿದಂತೆ ಒಟ್ಟು 800 ರು.) ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನಗೊಳಿಸಲು ಈಗಾಗಲೇ ಮಂಜೂರಾತಿ ನೀಡಲಾಗಿದ್ದು, ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.ಹಾಗೇ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರು.ನಂತೆ ಗರಿಷ್ಠ 5 ಲಕ್ಷ ರು. ಇಂಡಿಗಂಟು ಸೌಲಭ್ಯ ನೀಡಲಾಗುತ್ತಿದೆ. 2024ನೇ ಸಾಲಿಗೆ ಅನ್ವಯಿಸುವಂತೆ ಸುಮಾರು 27 ಅತಿಥಿ ಉಪನ್ಯಾಸಕರು ವಯೋನಿವೃತ್ತಿ ಹೊಂದಲಿದ್ದಾರೆ. ಸದರಿ ಅವರಿಗೆ ಇಡಿಗಂಟು ಯೋಜನೆ ಜಾರಿಗೊಳಿಸಲು ಗರಿಷ್ಠ 135 ಲಕ್ಷ ರು.ಗಳ ಅನುದಾನ ಅವಶ್ಯವಿದ್ದು, ಈ ಅನುದಾನದ ಲಭ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ.
ಅತಿಥಿ ಉಪನ್ಯಾಸಕರು ಕರ್ತವ್ಯದ ಅವಧಿಯಲ್ಲಿ ಮೃತಪಟ್ಟರೆ ಅವರ ಅವಲಂಬಿತರಿಗೆ ಯಾವುದೇ ಸೌಲಭ್ಯ ನೀಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.34,509 ಅರ್ಜಿ:
2024-25ನೇ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು ಒಟ್ಟು 34,509 ಅರ್ಜಿಗಳು ಸ್ವೀಕೃತವಾಗಿವೆ. ಅತಿಥಿ ಉಪನ್ಯಾಸಕರನ್ನು ನೇಮಿಸಬೇಕಿರುವ ಒಟ್ಟು 40 ವಿಷಯಗಳ ಪೈಕಿ 30 ವಿಷಯಗಳಿಗೆ ಅವಶ್ಯವಿರುವ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿ ನಿಗದಿತ ಅರ್ಹತಾ ಮಾನದಂಡ ಹೊಂದಿದ್ದಾರೆ.ಉಳಿದ 10 ವಿಷಯಗಳಿಗೆ ಯುಜಿಸಿ ನಿಗದಿತ ಅರ್ಹತಾ ಮಾನದಂಡ ಹೊಂದಿರುವ 1,370 ಅಭ್ಯರ್ಥಿಗಳ ಕೊರತೆ ಇದೆ. ಇಷ್ಟೂ ವಿಷಯಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಾಗುವವರೆಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ನಾತಕೋತ್ತರ ಪದವಿಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನೇ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳುವ ಬಗ್ಗೆ ಪರಿಶೀಲಿಸಿಲಾಗುವುದು ಎಂದಿದ್ದಾರೆ.