ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಮನುಷ್ಯನ ಜೀವನದಲ್ಲಿ ಆರೋಗ್ಯವೇ ಅತ್ಯಮೂಲ್ಯ ಸಂಪತ್ತು.
ವಿಶೇಷ ಆಯುಷ್ ಆರೋಗ್ಯ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಗುಂದ
ಜೀವನಶೈಲಿಯಲ್ಲಿ ಅನೇಕ ರೋಗಗಳು ನಮ್ಮನ್ನು ಕಾಡುತ್ತಿವೆ. ಇಂತಹ ಸಮಯದಲ್ಲಿ ನಮ್ಮದೇ ದೇಶದ ಪ್ರಾಚೀನ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನವಾದ ಆಯುಷ್ ಪದ್ಧತಿಯು ಚಿಕಿತ್ಸೆ ಪಡೆದುಕೊಳ್ಳಬೇಕೆಂದು ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆಯುಷ್ ಇಲಾಖೆ ಗದಗ, ತಾಲೂಕಾ ಆಯುಷ್ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಆಯುಷ್ ಆರೋಗ್ಯ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಮನುಷ್ಯನ ಜೀವನದಲ್ಲಿ ಆರೋಗ್ಯವೇ ಅತ್ಯಮೂಲ್ಯ ಸಂಪತ್ತು. ಇಂದಿನ ಧಾವಂತದ ಜೀವನಶೈಲಿಯಲ್ಲಿ ಅನೇಕ ರೋಗಗಳು ನಮ್ಮನ್ನು ಕಾಡುತ್ತಿವೆ. ಇಂತಹ ಸಮಯದಲ್ಲಿ ನಮ್ಮದೇ ದೇಶದ ಪ್ರಾಚೀನ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನವಾದ ಆಯುಷ್ ಪದ್ಧತಿಯು ಅಡ್ಡಪರಿಣಾಮಗಳಿಲ್ಲದೆ ಆರೋಗ್ಯ ಪಾಲನೆ ಮಾಡಲು ನಮಗೆ ನೆರವಾಗುತ್ತದೆ ಎಂದರು.ಭಾರತೀಯ ಪ್ರಾಚೀನ ವೈದ್ಯಕೀಯ ಜ್ಞಾನವನ್ನು ಆಧರಿಸಿರುವ ಈ ಪದ್ಧತಿಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದಾ ತಿಗಳೆರಿ ಮಾತನಾಡಿ, ಆಯುಷ್ ಎಂದರೆ ಆಯುರ್ವೇದ, ಯೋಗ ಮತ್ತು ನಿಸರ್ಗ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ವೈದ್ಯಕೀಯ ಪದ್ಧತಿಗಳ ಒಟ್ಟು ರೂಪವಾಗಿದೆ. ಆಯುಷ್ ಮಂತ್ರಾಲಯದ ಅಡಿಯಲ್ಲಿ ಬರುವ ಮುಖ್ಯ ಪದ್ಧತಿಯಾದ ಆಯುರ್ವೇದವು ಗಿಡಮೂಲಿಕೆ ಮತ್ತು ನೈಸರ್ಗಿಕ ದ್ರವ್ಯಗಳನ್ನು ಬಳಸಿ ರೋಗವನ್ನು ಮೂಲದಿಂದ ನಿವಾರಿಸುವ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ ಎಂದರು.ಡಾ. ಸಂಜೀವ ನಾರಪ್ಪನವರ ಮಾತನಾಡಿ, ಯೋಗ ಮತ್ತು ನಿಸರ್ಗ ಚಿಕಿತ್ಸೆಯು ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಡಾ. ಸುಧಾಕರ ಆಧುನಿಕ ಜನಪ್ರಿಯ ಪದ್ಧತಿಯಾದ ಹೋಮಿಯೋಪತಿ ಬಗ್ಗೆ ವಿವರಿಸಿದರು.ಇದೇ ಸಂದರ್ಭ 100 ಜನಕ್ಕೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎಸ್. ಹೂಲಿ, ನ್ಯಾಯವಾದಿಗಳಾದ ಎಂ.ಟಿ. ಪಾಟೀಲ, ಎಫ್.ವೈ. ದೊಡ್ಡಮನಿ, ನ್ಯಾಯಾಲಯದ ಸಿಬ್ಬಂದಿ, ಆಯುಷ್ ಇಲಾಖೆಯ ವಿವಿಧ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.