ಆರೋಗ್ಯವೆಂದರೆ ಮಾನಸಿಕ ಸದೃಢತೆ

| Published : Jun 12 2024, 01:46 AM IST

ಸಾರಾಂಶ

ಆರೋಗ್ಯ ಕಾಪಾಡುವುದೆಂದರೆ ದೈಹಿಕವಾಗಿ ಸದೃಢವಾಗಿರುವುದಲ್ಲ. ಬದಲಿಗೆ ಮಾನಸಿಕವಾಗಿಯೂ ಸದೃಢರಾಗುವುದನ್ನು ಎಲ್ಲರೂ ಕಲಿಯಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರೋಗ್ಯ ಕಾಪಾಡುವುದೆಂದರೆ ದೈಹಿಕವಾಗಿ ಸದೃಢವಾಗಿರುವುದಲ್ಲ. ಬದಲಿಗೆ ಮಾನಸಿಕವಾಗಿಯೂ ಸದೃಢರಾಗುವುದನ್ನು ಎಲ್ಲರೂ ಕಲಿಯಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ವಿಕಾಸಸೌಧದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ‘ವಿಧಾನಸಭೆ ಅಧಿಕಾರಿಗಳಿಗೆ ಒತ್ತಡ ನಿರ್ವಹಣೆ ಮತ್ತು ಸ್ಥಿತಿ ಸ್ಥಾಪಕತ್ವ ಅಭಿವೃದ್ಧಿ ಹಾಗೂ ಪರಿಣಾಮಕಾರಿ ಸಂವಹನ, ನಾಯಕತ್ವ ಅಭಿವೃದ್ಧಿ’ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅಂಕ ಗಳಿಕೆಯೇ ಶಿಕ್ಷಣದ ಗುರಿಯಲ್ಲ. ಬದಲಿಗೆ ವಿದ್ಯಾರ್ಥಿಗಳು ಸುಶಿಕ್ಷಿತರಾಗುವುದಲ್ಲದೇ, ಉತ್ತಮ ಪ್ರಜೆಗಳಾಗುವಂತೆ ಮಾಡಬೇಕು. ಸಮಸ್ಯೆ ಯಿಲ್ಲದ ಸಂಸಾರ, ಊರು, ವ್ಯಕ್ತಿಗಳಿಲ್ಲ. ಎಲ್ಲರಿಗೂ ಒತ್ತಡ, ಯೋಚನೆಗಳು ಇರುತ್ತವೆ. ಅದೆಲ್ಲವನ್ನು ಮೀರಿ ಉತ್ತಮ ಕೆಲಸ ಮಾಡಬೇಕು ಎಂದರು.

ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕ ಆರೋಗ್ಯವಷ್ಟೇ ಅಲ್ಲದೆ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ಸಾಗಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ನೂರು ಜನರು ಕೆಲಸ ಮಾಡುವುದನ್ನು 70 ಜನರು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಿದೆ. ಆದರೂ, ಆ ಒತ್ತಡವನ್ನು ಮರೆತು ಉತ್ತಮ ಕೆಲಸ ಮಾಡುವ ಮೂಲಕ, ಇತರರಿಗೆ ಮಾದರಿಯಾಗುವಂತೆ ಅಧಿಕಾರಿ, ನೌಕರರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಅಲಯನ್ಸ್‌ ವಿಶ್ವವಿದ್ಯಾಲಯದ ಡಾ.ತೋಸೇಂದ್ರ ದ್ವಿವೇದಿ, ಕುಲಸಚಿವೆ ಸುರೇಖಾಶೆಟ್ಟಿ ಇತರರಿದ್ದರು.